ಔರಂಗಾಬಾದ್ ನ ದೇವಗಿರಿ ಕೋಟೆ.
ಔರಂಗಾಬಾದ್ ನ ದೇವಗಿರಿ ಕೋಟೆ.
ದೇವಗಿರಿಯೆಂದು ಮೊದಲು ಕರೆಯಲ್ಪಟ್ಟಿದ್ದ ಈ ಕೋಟೆ, ಹಲವು ಇತಿಹಾಸಕಾರರ ಪ್ರಕಾರ, ರಾಷ್ಟçಕೂಟ ರಾಜರಿಂದ ಕಟ್ಟಲ್ಪಟ್ಟಿದ್ದು. ಎಲ್ಲೋರಾದ ಗುಹೆಗಳನ್ನು ಕೊರೆದು ಕೆತ್ತಿರುವ ರಾಷ್ಟ್ರಕೂಟರಿಂದ ಮಾತ್ರ ಇಂತಹ ಅಪೂರ್ವವಾದ ಕೋಟೆಯನ್ನು ಕಟ್ಟಲು ಸಾಧ್ಯ ಎನ್ನುವುದು ಇತಿಹಾಸಕಾರರ ಅಂಬೋಣ.ಈ ಕೋಟೆ ರಚನೆಯಲ್ಲಿ ವಿಶೇಷತೆಯನ್ನು ಹೊಂದಿರುವ ಕೋಟೆಯಾಗಿದೆ. ವಿಶಾಲವಾದ ಮೈದಾನ ಪ್ರದೇಶದಿಂದ ಪ್ರಾರಂಭಗೊಳ್ಳುವ ಕೋಟೆ ಪಿರಮಿಡ್ ಆಕೃತಿಯ ಬೆಟ್ಟವೊಂದರ ಮೇಲೆ ಕಟ್ಟಲ್ಪಟ್ಟಿದೆ. ಈ ಕಲ್ಲಿನ ಬೆಟ್ಟವನ್ನು ಕೊರೆದು ಕಟ್ಟಿ, ಕೋಟೆಯನ್ನು ಆಕ್ರಮಣಕಾರರಿಂದ ರಕ್ಷಿಸಿಕೊಳ್ಳುವಂತೆ ಮಾಡಲಾಗಿತ್ತು.
ಈ ಕೋಟೆಯು ಮೂರು ಸುತ್ತುಗಳನ್ನು ಹೊಂದಿದ್ದು, ಹೊರಗಿನ ಸುತ್ತನ್ನು ‘ಅಂಬರಕೋಟ್’ ಎಂದೂ ಎರಡನೆಯ ಸುತ್ತನ್ನು ‘ಮಹಾಕೋಟ್’ ಎಂದೂ, ಕೊನೆಯ ಹಾಗೂ ಬೆಟ್ಟದ ಮೇಲಿನ ಕೋಟೆಯಭಾಗವನ್ನು ‘ಕಾಲಾಕೋಟ್’ ಎಂದು ಕರೆಯಲಾಗುತ್ತದೆ.
ಅಂಬರಕೋಟ್ ದೌಲತಾಬಾದ್ ನ ಹಳೆಯ ನಗರದಲ್ಲಿ ಹರಡಿಹೋಗಿದ್ದು, ಕೋಟೆಯ ಶಿಖರ ಭಾಗದಿಂದ ಇದರ ಗುರುತುಗಳನ್ನು ಕಾಣಬಹುದಾಗಿದೆ. ಮಹಾಕೋಟ್ ಕೋಟೆಯ ಬೆಟ್ಟದ ಸುತ್ತ ಹರಡಿಕೊಂಡಿದ್ದು ಈ ಸುತ್ತಿನ ನಂತರ ನೀರಿನ ಅಗಳು ಅಥವಾ ಕಂದಕ ಹಾಗೂ ಕಡಿದಾದ ಗೋಡೆ ಹೊಂದಿರುವ ಕಾಲಾಕೋಟ್ ಇದೆ.ಕೋಟೆಯ ಈ ಕಾಲಾಕೋಟ್ ಸುತ್ತನ್ನು ಪ್ರವೇಶಿಸಲು “ಅಂಧೇರೀ ಕಾ ರಾಸ್ತಾ” ಎಂಬ ಕತ್ತಲಿನ ದಾರಿಯನ್ನು ದಾಟಬೇಕು, ದುರ್ಗಮ ದಾರಿಯನ್ನು ಹೊಂದಿರುವ ಈ ರಾಸ್ತಾದಲಿ,್ಲ ದಾಟುವ ದಾರಿ ನೇರವಾಗಿದ್ದು ಸುಲಭವಾಗಿ ಹೋಗುವ ದಾರಿಯಾಗಿರದೆ ,ತಿರುವು ಮುರುವಾಗಿದ್ದು ಅಂದಾಜಿಸಲು ಸಾಧ್ಯವಾಗದ ರೀತಿಯಲ್ಲಿ ನಿರ್ಮಿಸಲಾಗಿದೆ. ಕತ್ತಲೆಯ ಜೊತೆಗೆ ಈ ರೀತಿಯ ಮೆಟ್ಟಿಲುಗಳುಳ್ಳ ದಾರಿ ವೈರಿಗಳನ್ನು ಪೇಚಿಗೆ ಸಿಲುಕಿಸುತ್ತಾ ಇದ್ದಿರಬಹುದು. ಈ ದಾರಿಯಲ್ಲಿ ಸಾಗುವಾಗ ಮೇಲಿರುವಸಣ್ಣ ಕಿಂಡಿಗಳನ್ನು ಬೆಳಕಿಗೋಸ್ಕರ ಸೈನಿಕರು ನಿಸ್ಸಹಾಯಕರಾಗಿ ನೋಡುತ್ತಿದ್ದಾಗ ಮೇಲಿನಿಂದ ಕಾದ ಎಣ್ಣೆ ಸುರಿಯುವ ವ್ಯವಸ್ಥೆ ಸಹ ಇತ್ತಂತೆ. ಈ ಅಂಕುಡೊಂಕಿನ ದಾರಿಯನ್ನು ಕಲ್ಲಿನ ಬೆಟ್ಟದಲ್ಲಿ ಕೊರೆದು ನಿರ್ಮಿಸಿರುವುದು ಆಗಿನ ಕಾಲದ ನಿರ್ಮಾಣ ತಂತ್ರಜ್ಞಾನದ ಬಗ್ಗೆ ಅಚ್ಚರಿ ಹುಟ್ಟುವಂತೆ ಮಾಡುತ್ತದೆ. ಆಕ್ರಮಣಕಾರರು ಅಂಧೇರಿ ಕಾ ರಾಸ್ತಾನಾ ಬೈ ಪಾಸ್ ಮಾಡಲೂ ಯಾವುದೇ ಬೇರೆ ದಾರಿಗಳಿರುತ್ತಿರಲಿಲ್ಲ.
ಕಡಿದಾದ ಬೆಟ್ಟದ ಸುತ್ತ ಇರುವ ನೀರಿನ ಕಾಲುವೆಯು ಬೇಕಾದಾಗ ನೀರಿನ ಪ್ರವಾಹವನ್ನು ಸೃಷ್ಟಿ ಮಾಡಲು ಅಣೆಕಟ್ಟೆ ಹೊಂದಿತ್ತು. ವೈರಿಗಳು ಆಕ್ರಮಣ ಮಾಡಲಾಗದಂತೆ ಕಾಲುವೆಯೊಳಗೆ ವಿಷಜಂತುಗಳು, ಚೂಪಾದ ಈಟಿಗಳು ಇದ್ದುದಲ್ಲದೆ, ಸೇತುವೆಯ ಮೇಲಿನಿಂದ ಕಾಲುವೆಯನ್ನು ದಾಟಿ ಕೋಟೆಯೊಳಗಡೆ ನುಗ್ಗಲು ಪ್ರಯತ್ನಿಸುವವರನ್ನು ಅಚಾನಕ್ಕಾಗಿ ಬರುವ ಪ್ರವಾಹ ತೊಳೆದುಕೊಂಡು ಹೋಗುವಂತೆ ವ್ಯವಸ್ಥೆ ಇತ್ತಂತೆ. ಅಷ್ಟೇ ಎತ್ತರದಲ್ಲಿ ಈ ಮುಳುಗು ಸೇತುವೆಯನ್ನು ನಿರ್ಮಿಸಲಾಗಿದೆ.
ಮೋಸದಿಂದ ಮಾತ್ರ ಗೆಲ್ಲಬಹುದಾಗಿದ್ದ ಈ ಕೋಟೆಯ ಕೊನೆಯ ಹಂತವನ್ನು ಅಂಧೇರಿ ಕಾ ರಾಸ್ತಾ ಮೂಲಕ ಪ್ರವೇಶಿಸಿದರೆ ಮತ್ತೆ ಸುಮಾರು ನಾಲ್ಕುನೂರು ಕಡಿದಾದ ಮೆಟ್ಟಿಲುಗಳನ್ನು ಹತ್ತಿ ಕೋಟೆಯ ಶಿಖರ ಭಾಗಕ್ಕೆ ತಲುಪಬಹುದಾಗಿದೆ.
ಇತಿಹಾಸ.
ದೇವಗಿರಿ ಕೋಟೆಯನ್ನು ರಾಷ್ಟ್ರಕೂಟರು ಕಟ್ಟಿಸಿದ್ದೆಂದು ಹೇಳಲಾಗುತ್ತದೆ. ಯಾದವರು ಈ ಕೋಟೆಯನ್ನು ೧೧೮೭ ರಿಂದ ೧೩೧೮ ರವರೆಗೆ ಆಳಿದರು. ಈ ಮಧ್ಯೆ ಅಲ್ಲಾವುದ್ದೀನ್ ಖಿಲ್ಜಿ ೧೩೦೭ ರಲ್ಲಿ ಈ ಕೋಟೆಯನ್ನು ಆಕ್ರಮಣ ಮಾಡಿ ಗೆದ್ದಿದ್ದರೂ ಸಹ ಯಾದವರೊಡನೆ ನಡೆದ ಸಂಧಾನದಿಂದ ಕೋಟೆ ಯಾದವರಲ್ಲೇ ಉಳಿದಿತ್ತು. ನಂತರ ಈ ಕೋಟೆಯನ್ನು ೧೩೦೭ರಲ್ಲಿ ಮಾಲಿಕ್ ಕಾಫೂರ ನಂತರ ೧೩೧೮ರಲ್ಲಿ ಖುತುಬುದ್ದೀನ ಮುಬಾರಕ್ ಖಿಲ್ಜಿ ಗೆದ್ದಿದ್ದ ಎನ್ನಲಾಗುತ್ತದೆ.
೧೩೨೭ ರಲ್ಲಿ ತುಘಲಕ್ ದೆಹಲಿಯಿಂದ ತನ್ನ ರಾಜಧಾನಿಯನ್ನು ದೇವಗಿರಿಗೆ ವರ್ಗಾಯಿಸಿ ಕೋಟೆಯನ್ನು ದೌಲತಾಬಾದ್ ಎಂದು ಮರುನಾಮಕರಣ ಮಾಡಿದ.೧೩೪೭ ರಲ್ಲಿ ಹಸನ್ ಗಂಗು ಬಹಮನಿ ತನ್ನ ಬಹಮನಿ ಸಾಮ್ರಾಜ್ಯವನ್ನು ಇಲ್ಲೇ ಪ್ರಾರಂಭಿಸಿದ. ನಂತರ ಸುಮಾರು ೧೫೦ ವರ್ಷಗಳ ಕಾಲ ಬಹಮನಿಗಳೇ ಈ ಕೋಟೆಯನ್ನು ಆಳಿದರು. ೧೪೯೯ರಲ್ಲಿ ಈ ಕೋಟೆಯನ್ನು ತನ್ನ ವಶಕ್ಕೆ ಪಡೆದ ಅಹಮದ್ ನಗರದ ನಿಜಾಮ,ಕೋಟೆಯ ಸುತ್ತ ‘ಔರಂಗಾಬಾದ್’ ನಗರವನ್ನು ಕಟ್ಟಿದ.
೧೬೩೩ರಲ್ಲಿ ಶಹಜಹಾನ ಈ ಕೋಟೆಯನ್ನು ಗೆದ್ದ, ೧೬೩೫ರಲ್ಲಿ ಔರಂಗಜೇಬ್ ದೌಲತಾಬಾದನ್ನು ದಖನ್ನಿನ ರಾಜಧಾನಿಯನ್ನಾಗಿ ಮಾಡಿದ. ೧೭೨೪ರಲ್ಲಿ ಹೈದರಾಬಾದ್ ನ ನಿಜಾಮರ ವಶವಾಗಿದ್ದ ಈ ಕೋಟೆಯನ್ನು ಕೊನೆಗೆ ೧೭೬೦ ರಲ್ಲಿ ಸದಾಶಿವ ರಾವ್ ಪೇಶ್ವೆ ಗೆದ್ದಿದ್ದ.
--------------------------------------
ವೈರಿಗಳ ಆಕ್ರಮಣದಿಂದ ರಕ್ಷಿಸಿಕೊಳ್ಳಲು ಕೋಟೆಯಲ್ಲಿ ಹಲವು ಭದ್ರತಾ ಏರ್ಪಾಡುಗಳನ್ನು ಹೊಂದಿತ್ತು. ಮೂರು ಸುತ್ತಿನ ಅಭೇದ್ಯ(!?) ಕೋಟೆ, ಫಿರಂಗಿಗಳನ್ನು ಹೊಂದಿದ ಬತೇರಿಗಳು, ರಕ್ಷಣಾತ್ಮಕ ದಿಡ್ಡಿ ಬಾಗಿಲುಗಳು, ಆಳವಾದ ನೀರಿನ ಕಂದಕ, ಅಂಧಕಾರದ ದಾರಿ, ನೇರವಾದ ಹಾಗೂ ನುಣುಪಾದ ಮೂರನೇ ಸುತ್ತಿನ ನೇರ ಗೋಡೆ ಮುಂತಾದವು ಈ ಕೋಟೆಯ ರಕ್ಷಣೆಗೆ ಮಾಡಿದ ಏರ್ಪಾಡುಗಳು.
ನೀರಿನ ಮೂಲಗಳು:
ಕೋಟೆಯ ಸುತ್ತ ಹಲವು ನೀರಿನ ಬಾವಿಗಳನ್ನು ಹೊಂದಿದ್ದು ಅವುಗಳಲ್ಲಿ ಮೆಟ್ಟಿಲ ಬಾವಿಯ (ಬಾವಡಿ) ಪಾತ್ರ ಪ್ರಮುಖವಾದುದು. ಕೋಟೆಯ ಒಳಗಡೆ ಸರಸ್ವತಿ ಹಾಗೂ ಕಚೇರಿ ಎಂಬ ಮೆಟ್ಟಿಲ ಬಾವಿಗಳಿದ್ದರೆ, ಹೊರಗಡೆ ಸಿಹಿನೀರ ಮತ್ತು ಕಹಿನೀರ ಬಾವಿಗಳಿದ್ದವು. ಈ ಬಾವಿಗಳು ವರ್ಷಪೂರ್ತಿ ಕೋಟೆಯ ನೀರಿನ ಅವಶ್ಯಕತೆಯನ್ನು ಪೂರೈಸುತ್ತಿತ್ತು. ಆನೆ ಹೊಂಡ ಎಂಬನೀರಿನ ಸಂಗ್ರಹಣಾ ತೊಟ್ಟಿ ಮತ್ತು ಈ ಎಲ್ಲಾ ಬಾವಿಗಳಿಗೆ ಕೋಟೆಯ ಹೊರಗಿನಿಂದ ಸತತ ನೀರು ಪೂರೈಕೆಗಾಗಿ ನೆಲದಡಿಯಲ್ಲಿ ಪೈಪ್ ಲೈನ್ ವ್ಯವಸ್ಥೆಯನ್ನು ನಿಜಾಮ್ ಶಾಹಿಯ ಮಂತ್ರಿಯಾಗಿದ್ದ ಮಲಿಕ್ ಅಂಬರ್ ಎಂಬುವವನು ಮಾಡಿದ್ದನು.
-----------------------------------------------------
ಕೋಟೆಯಲ್ಲಿ ನೋಡಲೇಬೇಕಾದಂತಹ ವಿಶೇಷ ಸ್ಥಳಗಳು:
೧.ಆನೆ ಹೊಂಡ (ಹಾತೀ ಹೌದ್)
೪೭ ಮೀಟರ್ ಉದ್ದ, ೪೬.೭೫ ಮೀಟರ್ ಅಗಲ , ೬.೬೧ ಮೀಟರ್ ಆಳವಿರುವ ಈ ನೀರಿನ ಸಂಗ್ರಹಣಾ ತೊಟ್ಟಿಯ ವಿಶಾಲತೆಯಿಂದ ಇದಕ್ಕೆ ಆನೆ ಹೊಂಡ ಎಂಬ ಹೆಸರು ಬಂದಿದೆ.
೨. ಭಾರತ್ ಮಾತಾ ಮಂದಿರ:
ಆನೆಹೊಂಡದ ಹತ್ತಿರ ದೊಡ್ಡದಾದ ಗುಮ್ಮಟಾಕೃತಿಯ ಮಹಾದ್ವಾರವೊಂದಿದ್ದು, ಇದರೊಳಗೆ ವಿಶಾಲವಾದ ಅಂಗಳವಿದೆ ನಂತರ ಸುಂದರವಾದ ಕೆತ್ತನೆಗಳನ್ನೊಳಗೊಂಡ ಕಂಬಗಳನ್ನು ಹೊಂದಿರುವ ಭಾರತ್ ಮಾತಾ ಮಂದಿರವಿದೆ. ಈ ಮಂದಿರದಲ್ಲಿ ಭಾರತ ಮಾತೆಯ ಸುಂದರವಾದ ಮೂರ್ತಿಯಿದೆ.
ಈ ಮಂದಿರವನ್ನು ಯಾದವರ ಕಾಲದಲ್ಲಿ ಕಟ್ಟಿರಬಹುದಾಗಿದ್ದು, ಮೊದಲಿಗೆ ಇದು ಜೈನ ಮಂದಿರವಾಗಿತ್ತು. ನಂತರ ೧೩೧೮ರಲ್ಲಿ ದೆಹಲಿಯ ಕುತುಬುದ್ದೀನ್ ಮುಬಾರಕ್ ಖಿಲ್ಜಿ ಇದನ್ನು ಮಸೀದಿಯಾಗಿಸಿದ್ದ.
೧೭ ಸೆಪ್ಟೆಂಬರ್ ೧೯೪೮ರಲ್ಲಿ ಇಲ್ಲಿ ಭಾರತಮಾತೆಯ ಮೂರ್ತಿಯನ್ನು ಪ್ರತಿಷ್ಟಾಪಿಸಲಾಯಿತು.
೩. ಚಾಂದ್ ಮಿನಾರ್:
ಭಾರತ್ ಮಾತಾ ಮಂದಿರದಿಂದ ಹೊರಬರುತ್ತಿದ್ದಂತೆಯೇ ಎದುರು ಕಾಣುವ ಎತ್ತರದ ಗೋಪುರವೇ ಚಾಂದ್ ಮಿನಾರ್. ಮೂರು ಮಹಡಿಯನ್ನು ಹೊಂದಿರುವ ಈ ಗೋಪುರ ೬೫ ಮೀಟರ್ ಎತ್ತರವಿದೆ. ದೆಹಲಿಯ ಕುತುಬ್ ಮಿನಾರ್ ನಂತರ ಅತೀ ಎತ್ತರದ ಗೋಪುರ ಇದಾಗಿದ್ದು, ಪರ್ಷಿಯನ್ ಟೈಲ್ಸ್ ಗಳಿಂದ ಅಲಂಕೃತಗೊಂಡಿದೆ
ಸುರುಳಿಯಾಕಾರದ ಮೆಟ್ಟಿಲುಗಳನ್ನು ಹೊಂದಿರುವ ಗೋಪುರದ ಕೆಳಗಡೆ ಮಸೀದಿಯಿದೆ. ಈ ವಿಜಯ ಸ್ಥಂಭವನ್ನು ಪ್ರವೇಶಿಸಲು ಪ್ರವಾಸಿಗರಿಗೆ ಅವಕಾಶವಿರುವುದಿಲ್ಲ. ಚಾಂದ್ ಮಿನಾರನ್ನು ಕೋಟೆಯ ಪ್ರತೀ ಮೂಲೆಯಿಂದಲೂ ನೋಡಬಹುದಾಗಿದ್ದು ಇದನ್ನು ಸುಲ್ತಾನ್ ಮಹಮದ್ ಶಾ ಬಹಮನಿ ೧೪೪೭ರಲ್ಲಿ ಈ ಕೋಟೆಯನ್ನು ಗೆದ್ದ ಸಂತೋಷವನ್ನು ಸಂಭ್ರಮಿಸುವುದಕ್ಕಾಗಿ ಕಟ್ಟಿಸಿದ, ಹೀಗಾಗಿ ಇದಕ್ಕೆ ವಿಜಯ ಸ್ಥಂಭ ಎಂಬ ಹೆಸರೂ ಇದೆ.
೪.ವಸ್ತು ಸಂಗ್ರಹಾಲಯ (ಮ್ಯೂಸಿಯಂ): ಚಾಂದ್ ಮಿನಾರಿನ ಹಿಂಭಾಗದಲ್ಲಿ ವಸ್ತು ಸಂಗ್ರಹಾಲಯ ಒಂದಿದ್ದು ಇದರಲ್ಲಿ ಪುರಾತನ ವಸ್ತುಗಳನ್ನು, ಮೂರ್ತಿಗಳನ್ನು,ಕಲಾತ್ಮಕವಾಗಿ ಪ್ರದರ್ಶಿಸಲಾಗಿದೆ.
೫.ಚೈನೀ ಮಹಲ್:
ರಾಜಕೈದಿಗಳನ್ನು ಬಂಧಿಸಿಡಲು ಬಳಸಲಾಗುತ್ತಿದ್ದ ಈ ಸೆರೆಮನೆ ಕಟ್ಟಡಕ್ಕೆ ಈ ಹೆಸರು ಬರಲು ಕಾರಣ, ಈ ಕಟ್ಟಡಕ್ಕೆ ಚೈನಾದ ಮಣ್ಣಿನ ಟೈಲ್ಸ್/ಹಂಚುಗಳನ್ನು ಹೊದಿಸಲಾಗಿರುವುದು. ಹಲವಾರು ಬಂಧಿತ ರಾಜರುಗಳನ್ನು ಹಾಗೂ ರಾಜ ಕೈದಿಗಳನ್ನು ಇಲ್ಲಿ ಸೆರೆಯಿಡಲಾಗುತ್ತಿತ್ತಂತೆ. ಛತ್ರಪತಿ ಶಿವಾಜಿ ಮಹಾರಾಜರ ಪತ್ನಿ, ಪುತ್ರರನ್ನು ಇಲ್ಲಿ ಸೆರೆಯಿಡಲಾಗಿತ್ತು ಎಂದು ಹೇಳಲಾಗುತ್ತದೆಯಾದರೂ, ಇದಕ್ಕೆ ಯಾವುದೇ ಆಧಾರಗಳು ಸಿಗುವುದಿಲ್ಲ.
೬.ಮೇಂಧಾ ತೋಪು: (ಟಗರು ಫಿರಂಗಿ)
ಚೈನೀ ಮಹಲ್ ಹತ್ತಿರ ಬತೇರಿಯ ಮೇಲೆ ದೊಡ್ಡದಾದ ಫಿರಂಗಿಯಿದೆ. ಈ ಫಿರಂಗಿಯ ಹಿಂದಿನ ತುದಿಯಲ್ಲಿ ಟಗರಿನ ತಲೆಯ ಅಚ್ಚಿರುವುದರಿಂದ ಇದಕ್ಕೆ ಮೇಂಧಾ ತೋಪು (ಮೇಂಧಾ=ಟಗರು) ಎಂಬ ಹೆಸರು ಬಂದಿದೆ.
ಈ ಫಿರಂಗಿಯನ್ನು ಅಫ್ಘಾನಿಸ್ತಾನದಲ್ಲಿ ತಯಾರಿಲಾಗಿದ್ದು, ತಿರುಗಣೆಯ ಮೇಲೆ ಅಳವಡಿಸಿರುವುದರಿಂದ ಬೇಕಾದ ಕಡೆಗೆ ಫಿರಂಗಿಯನ್ನು ತಿರುಗಿಸಿ ಗುರಿ ಹಿಡಿಯಲು ಸಾಧ್ಯವಾಗುತ್ತಿತ್ತು. ಈ ತಂತ್ರಜ್ಞಾನದ ಇನ್ನೊಂದು ವಿಶೇಷತೆಯೆಂದರೆ, ಈ ಫಿರಂಗಿಯನ್ನು ಕೇವಲ ನೂರಾಎಂಭತ್ತು ಡಿಗ್ರೀವರೆಗೆ ಮಾತ್ರ ತಿರುಗಿಸಬಹುದಾಗಿದ್ದು, ಕೋಟೆಯಿಂದ ವೈರಿಗಳ ಮೇಲೆ ಆಕ್ರಮಣ ಮಾಡಬಹುದೇ ವಿನಹ ವೈರಿಗಳಿಗೂ ಸಹ ಕೋಟೆಯ ಕಡೆಗೆ ಇದೇ ಫಿರಂಗಿಯನ್ನು ತಿರುಗಿಸಿ ಉಡಾಯಿಸುವುದು ಸಾಧ್ಯವಾಗುತ್ತಿರಲಿಲ್ಲ.
ಫಿರಂಗಿಯ ಮೇಲೆ ರಾಜ ಔರಂಗಜೇಬ್ ಹಾಗೂ ಶಿಲ್ಪಿ ಮಹಮ್ಮದ್ ಅರಬ್ ನ ಹೆಸರನ್ನು ಟಂಕಿಸಲಾಗಿದೆ. ಫಿರಂಗಿಯ ಮುಂದಿನ ತುದಿಯಲ್ಲಿ ಕುರಾನಿಗೆ ಸಂಬಂಧಿಸಿದ ಶಾಸನವೊಂದನ್ನೂ ಸಹ ಟಂಕಿಸಲಾಗಿದೆ.
೭.ನಿಜಾಮಶಾಹೀ ಅರಮನೆ: ವಾಸ್ತುಶಿಲ್ಪ ಹಾಗೂ ಅಲಂಕಾರಿಕ ಕೆಲಸಗಳಿಗೆ ಹೆಸರುವಾಸಿಯಾಗಿದ್ದ ಈ ಅರಮನೆ ಶಿಥಿಲಗೊಂಡಿದ್ದು ಮರುನಿರ್ಮಾಣ ಕರ‍್ಯ ನಡೆಯುತ್ತಿದೆ.
೮.ಅಗಳು ಅಥವಾ ಕಂದಕ:
ಕಾಲಾಕೋಟ್ ಸುತ್ತನ್ನು ಪ್ರವೇಶಿಸುವ ಮುಂಚೆ ಇರುವ ದುರ್ಗಮವಾದ ನೀರಿನ ಕಂದಕ, ವೈರಿಗಳಿಗೆ ನೀರು ಕುಡಿಸಿರಲಿಕ್ಕೋಸ್ಕರವೇ ನಿರ್ಮಾಣ ಮಾಡಲಾಗಿತ್ತು. ಕೋಟೆಯ ಮುಖ್ಯ ಭಾಗವನ್ನು ಸುತ್ತುವರಿದಿದ್ದ ಈ ಕಂದಕದ ಮತ್ತೊಂದು ಭಾಗದಲ್ಲಿ ಎತ್ತರದ ಗೋಡೆಯಿದ್ದು, ಕಲ್ಲಿನ ಬೆಟ್ಟವನ್ನು ಕತ್ತರಿಸಿ ಚಾಣದಿಂದ ನುಣುಪಾಗಿಸಿ ಹತ್ತಲು ಅಸಾಧ್ಯಗೊಳಿಸಲಾಗಿತ್ತು. ೨೦ ಮೀಟರ್ ಆಳ ಹಾಗೂ ೧೬ ಮೀಟರ್ ಅಗಲವಿರುವ ಈ ಅಗಳು ಮಧ್ಯಕಾಲೀನ ತಾಂತ್ರಿಕ ನೈಪುಣ್ಯತೆಯ ಕುರುಹಾಗಿದೆ. ಈ ಅಗಳಿನಲ್ಲಿ ಎರಡು ಅಣೆಕಟ್ಟುಗಳಿದ್ದು, ನೀರಿನ ಮಟ್ಟವನ್ನು ಬೇಕಾದಾಗ, ಬೇಕಾದಂತೆ ಕಾಯ್ದುಕೊಳ್ಳಬಹುದಾಗಿತ್ತು. ಇದರಿಂದಾಗಿ ಕಾಲಾಕೋಟ್ ಪ್ರವೇಶಿಸಲು ಇರುವ ಸೇತುವೆಯನ್ನೂ ಮುಳುಗಿಸಿ ಆಕ್ರಮಣಕಾರರನ್ನು ನಾಶಗೊಳಿಸುವುದು ಸಾಧ್ಯವಾಗುತ್ತಿತ್ತು.
ಈ ಅಗಳನ್ನು ದಾಟಿ ಹೋಗಲು ಎರಡು ಸೇತುವೆಗಳಿದ್ದು, ಕೆಳಗಿನ ಭಾಗದ ಸೇತುವೆ ಶಿಥಿಲಗೊಂಡಿದ್ದು, ಮೇಲಿನ ಭಾಗದ ಕಬ್ಬಿಣದ ಸೇತುವೆ ಇಂದಿಗೂ ಸುಸ್ಥಿತಿಯಲ್ಲಿದೆ. ಈ ಕಬ್ಬಿಣದ ಸೇತುವೆಯನ್ನು ೧೯೫೨ ರಲ್ಲಿ ಕಟ್ಟಲಾಯಿತು,ಅದಕ್ಕೂ ಮುಂಚೆ ಮೇಲ್ಭಾಗದ ಸೇತುವೆ ಇರುವ ಜಾಗದಲ್ಲಿ, ಬೇಕಾದಾಗ ಮಾತ್ರ ಬಳಸಿ ನಂತರ ಮಡಚಿ ತೆಗೆಯಬಹುದಾಗಿದ್ದ ಸೇತುವೆಯನ್ನು ಬಳಸಲಾಗುತ್ತಿತ್ತಂತೆ.
೯. ಅಂಧೇರೀ ಕಾ ರಾಸ್ತಾ ( ಕತ್ತಲ ದಾರಿ):
ಸೇತುವೆಯನ್ನು ದಾಟಿ ಕಾಲಾಕೋಟ್ ಪ್ರದೇಶವನ್ನು ಪ್ರವೇಶಿಸುತ್ತಿದ್ದಂತೆಯೇ ನಾವು, ಯಾದವರು ಕಟ್ಟಿದ್ದ ಮೂಲ ದೇವಗಿರಿ ಕೋಟೆಯನ್ನು ಪ್ರವೇಶಿಸುತ್ತೇವೆ. ಹೀಗೆ ಪ್ರವೇಶಿಸುತ್ತಿದ್ದಂತೆಯೇ ಅಂಧೇರೀ ಕಾ ರಾಸ್ತಾ ಎಂಬ ಕತ್ತಲ ದಾರಿಯ ಮೂಲಕವಾಗಿ ಹಾದು ಹೋಗಬಹುದು. (ಈಗ ಈ ಕತ್ತಲ ದಾರಿಯನ್ನು ಹೊರತುಪಡಿಸಿ ಬೇರೊಂದು ಬೆಳಕಿನ ದಾರಿಯೂ ಪ್ರವಾಸಿಗರಿಗೆ ಲಭ್ಯವಿದೆ) ಈ ಕತ್ತಲ ದಾರಿಯನ್ನು ಸಂಪೂರ್ಣವಾಗಿ ಕಲ್ಲಿನ ಬೆಟ್ಟವನ್ನು ಕೊರೆದು ಕಟ್ಟಲಾಗಿದೆ. ಈ ಕತ್ತಲ ದಾರಿಯ ಪ್ರವೇಶದ್ವಾರ ಗುಹೆಯಂತಿದ್ದು ನಂತರ ಸಂಪೂರ್ಣ ಕತ್ತಲಿನಲ್ಲಿ ಕಡಿದಾದ ಮೆಟ್ಟಿಲುಗಳನ್ನು, ತಿರುವು ಮುರುವಾದ ದಾರಿಯನ್ನು ಹೊಂದಿದೆ. ಈ ದಾರಿಯಲ್ಲಿ ಮೆಟ್ಟಿಲುಗಳನ್ನು ಹತ್ತಿ ಹೋಗುವ ದಾರಿ ೫೦ ಮೀಟರ್ ನಷ್ಟಿದೆ.
ಈ ಕತ್ತಲ ದಾರಿ ಎಷ್ಟು ಕಡುಗತ್ತಲಿನದೆಂದರೆ ಅದರೊಳಗೆ ನಡೆದಾಗಲೇ ನಿಮಗೆ ಭೀಕರ ಕತ್ತಲೆಯ ಭೀಕರತೆ ಅನುಭವಕ್ಕೆ ಬರಲು ಸಾಧ್ಯ. ಹಿಂದೆ ಪಂಜಿನ ಸಹಾಯವಿಲ್ಲದೇ ಈ ಅಂಧಕಾರದ ಹಾದಿಯನ್ನು ಯಾರಿಗೂ ದಾಟಲು ಸಾಧ್ಯವಾಗುತ್ತಿರಲಿಲ್ಲವಂತೆ. ಈಗ ಪ್ರವಾಸಿಗರು ತಮ್ಮ ಜಂಗಮವಾಣಿಯ (ಮೊಬೈಲ್) ಮಬ್ಬು ಬೆಳಕಿನಲ್ಲಿ ಈ ದಾರಿಯನ್ನು ದಾಟಲು ಪ್ರಯಾಸಪಡುವುದನ್ನು ನೋಡಬಹುದು.
ಕೇವಲ ಕತ್ತಲು ಮಾತ್ರವಲ್ಲದೇ ಈ ದಾರಿಯಲ್ಲಿ ಬೇರೆ ಅಪಾಯವನ್ನೊಡ್ಡುವ ತಂತ್ರಗಳನ್ನು ಅಳವಡಿಸಲಾಗಿತ್ತು ಅವೇನೆಂದರೆ
೧. ಅಂಧಕಾರದ ಹಾದಿಯಲ್ಲಿ ಮೇಲುಗಡೆ ಒಂದೆಡೆ ಬೆಳಕು ಹಾಗೂ ಗಾಳಿಗಾಗಿ ಸಣ್ಣ ಕಿಂಡಿಗಳಿವೆ, ಈ ಕಿಂಡಿಗಳನ್ನು ನೋಡಿ ಅನುಸರಿಸುತ್ತಾ ಕತ್ತಲಲ್ಲಿ ನಡೆಯುತ್ತಿದ್ದ ಶತ್ರು ಸೈನಿಕರು ಬೀಳುತ್ತಿದ್ದುದು ಕಂದಕದೊಳಗೆ. ಮುಳ್ಳು, ಈಟಿ ಹಾಗೂ ವಿಷಪ್ರಾಣಿಗಳಿಂದ ತುಂಬಿರುವ ಅಗಳಿನೊಳಗೆ ಈ ಎತ್ತರದಿಂದ ಬೀಳುವುದರೊಳಗಾಗಿ ಸೈನಿಕರ ಪ್ರಾಣ ಹೋಗಿದ್ದರೆ ಅದು ಅವರ ಅದೃಷ್ಟ.
೨.ಎಲ್ಲಿ ಹೋಗಬೇಕೆಂದು ತೋಚದೆ ಕತ್ತಲಹಾದಿಯಲ್ಲಿ ನಿಂತರೆ, ಮೇಲಿನಿಂದ ಕಲ್ಲುಗಳನ್ನು ಎತ್ತಿ ಹಾಕಿ ಮತ್ತು/ಅಥವಾ ಕುದಿಯುವ ಎಣ್ಣೆಯನ್ನು ಸುರಿದು ಶತ್ರುಗಳನ್ನು ಹಣಿಯುವ ವಿಧಾನವೂ ಇತ್ತು.
೩.ಶತ್ರುಗಳ ನಿರ್ನಾಮಕ್ಕಾಗಿ ಇದ್ದ ಕೊನೆಯ ಅಸ್ತ್ರ ವೆಂದರೆ ಕತ್ತಲ ಹಾದಿಯಿಂದ ತೀಕ್ಷ್ಣ ಬೆಳಕನ್ನು ನೋಡುತ್ತಾ ಹೊರಬರುವ ಸೈನಿಕರ ದಾರಿಯಲ್ಲಿ ಕುದಿಯುವ ಎಣ್ಣೆಯ ಕೊಪ್ಪರಿಗೆಯನ್ನಿರಿಸುವುದು.
ಬೆಳಕಿಲ್ಲದ ಕತ್ತಲನ್ನೂ ನಮಗೆ ಅನುಕೂಲವಾಗುವಂತೆ ಹೇಗೆ ಬಳಸಬಹುದು ಎಂಬುದನ್ನು ಈ ರಕ್ಷಣಾ ತಂತ್ರಗಾರಿಕೆಯಿಂದ ನಾವು ತಿಳಿದುಕೊಳ್ಳಬಹುದು.
೧೦. ಗಣೇಶ ದೇವಸ್ಥಾನ: ಪೇಶ್ವೆಯ ಕಾಲದಲ್ಲಿ ಕಟ್ಟಲಾಗಿದ್ದ ಈ ದೇವಸ್ಥಾನದಲ್ಲಿರುವ ಗಣೇಶ ಅಲ್ಲಿದ್ದ ಅರ್ಚಕರ ಪ್ರಕಾರ ಉದ್ಭವ ಮೂರ್ತಿಯಂತೆ. ಕೋಟೆಯ ಬರಾದರಿ ಅರಮನೆಯ ಭಾಗವನ್ನು ರಿಪೇರಿ ಮಾಡಲು ಪ್ರಯತ್ನಿಸಿದಾಗಲೆಲ್ಲಾ ಆ ಭಾಗದ ಗುಡ್ಡ ಕುಸಿದು ಬೀಳುತ್ತಿತ್ತಂತೆ, ಆಗ ಗಣೇಶನಿಗೆ ದೇವಸ್ಥಾನ ಕಟ್ಟಿಸಿ ಪೂಜಿಸಿದ ನಂತರ ತನ್ನ ಪುನರ್ನಿರ್ಮಾಣ ಕರ‍್ಯದಲ್ಲಿ ಯಶಸ್ವಿಯಾದನಂತೆ.
೧೧.ಬರಾದರಿ/ಪೆವಿಲಿಯನ್/ ಮಂಟಪದ ಅರಮನೆ:
ಕೋಟೆಯ ತುತ್ತತುದಿಗೆ ಹೋಗುವಾಗ ಕಾಣಸಿಗುವ ಮೊಘಲ್ ಚಕ್ರವರ್ತಿ ಶಹಜಹಾನ್ ಕಾಲದಲ್ಲಿ ಕಟ್ಟಿಸಿದ ಅರಮನೆಯೇ ಮಂಟಪದ ಅರಮನೆ. ಇವತ್ತಿನವರೆಗೂ ದೃಢವಾಗಿರುವ ಈ ಕಟ್ಟಡದ ಮಧ್ಯ ಭಾಗವು ಅಷ್ಟಕೋನಾಕೃತಿಯಲ್ಲಿದ್ದು ಸುಂದರವಾದ ಒಳಾಂಗಣವನ್ನು ಹೊಂದಿದೆ. ಈ ಅರಮನೆಯ ಜಗುಲಿಯಿಂದ ಕೋಟೆಯ ಸಂಪೂರ್ಣ ದೃಶ್ಯಾವಳಿಗಳು, ಸುತ್ತಮುತ್ತಲ ಬೆಟ್ಟಗುಡ್ಡಗಳು ಹಾಗೂ ದೂರದ ಊರುಗಳನ್ನು ಕಾಣಬಹುದು. ಈ ಅರಮನೆಯ ಹಿಂಭಾಗದಲ್ಲಿ ಮೋತಿ ಟ್ಯಾಂಕ್ ಇದ್ದು ಅದರಲ್ಲಿ ತಣ್ಣಗಿನ ಶುದ್ಧ ನೀರಿದೆ.
೧೨. ಜನಾರ್ಧನ ಸ್ವಾಮಿಯ ಧ್ಯಾನ ಗುಹೆ:
ಶ್ರೀ ಜನಾರ್ಧನ ಸ್ವಾಮಿ, ನಿಜಾಮಶಾಹಿ ಆಡಳಿತದಲ್ಲಿ ಕೋಟೆಯ ಅಧಿಕಾರಿಯಾಗಿದ್ದವರು, ಸಂತ ಸಹ ಆಗಿದ್ದ ಇವರು ಈ ಗುಹೆಯಲ್ಲಿ ಧ್ಯಾನ ಮಾಡಿದಾಗ ಶ್ರೀ ದತ್ತಾತ್ರೇಯರು ಪ್ರತ್ಯಕ್ಷರಾಗಿದ್ದರಂತೆ. ಇಂದಿಗೂ ಇಲ್ಲಿ ಇವರೀರ್ವರ ಪಾದುಕೆಗಳನ್ನ ನೋಡಬಹುದು.
೧೩.ದುರ್ಗಾ ಮತ್ತು ಕಾಲಾ ಪಹಾಡ್ ಫಿರಂಗಿಗಳು:
ಕೋಟೆಯ ತುತ್ತ ತುದಿಯಲ್ಲಿರುವ ಎರಡು ಬತೇರಿಗಳಲ್ಲಿ ‘ಕಾಲಾ ಪಹಾಡ್’ ಮತ್ತು ‘ದುರ್ಗಾ’ ಎಂಬೆರಡು ಫಿರಂಗಿಗಳನ್ನು ಇರಿಸಲಾಗಿದ್ದು, ಇಷ್ಟು ಎತ್ತರಕ್ಕೆ ಇವುಗಳನ್ನು ಹೇಗೆ ಸಾಗಿಸಲಾಯ್ತು ಎನ್ನುವುದೇ ಆಶ್ಚರ್ಯಕರ ಸಂಗತಿಯಾಗಿದೆ. ದುರ್ಗಾ ಫಿರಂಗಿ ಇರುವ ಬತೇರಿಯಲ್ಲಿ ಧ್ವಜಸ್ಥಂಭವಿದ್ದು ಸ್ವಾತಂತ್ರö್ಯ ದಿನಾಚರಣೆಯಂದು ಇಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಸಲಾಗುತ್ತದೆ.
ಇಷ್ಟು ದುರ್ಗಮವಾದ ಕೋಟೆಯನ್ನು ಹೀಗೆ ಎಷ್ಟೊಂದು ಜನ ರಾಜ ಮಹಾರಾಜರುಗಳು ಗೆದ್ದಿದ್ದು ಹೇಗೇ ಎಂಬುದೇ ಆಶ್ಚರ್ಯಕರ ಸಂಗತಿ. ಈ ಗೆಲ್ಲಲಾಗದ ಕೋಟೆಯನ್ನು ಗೆಲ್ಲಲು ಸಾಧ್ಯವಾಗುತ್ತಿದ್ದುದು ಕೇವಲ ಮರೆ ಮೋಸದಿಂದ ಮಾತ್ರವಂತೆ. ಹಾಗಾದರೆ ಇತಿಹಾಸದಲ್ಲಿ ಎಷ್ಟೊಂದು ಮರೆ ಮೋಸಗಳು ನಡೆದಿರಬಹುದಲ್ಲವೇ?
-----------------------------------------------------
ಔರಂಗಾಬಾದ್ ನ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿರುವ ಕಂಪೆನಿಯೊಂದ ರಲ್ಲಿ ಉದ್ಯೋಗದಲ್ಲಿರುವ ಸಹೋದರನ ಜೊತೆಗೆ ಅಲ್ಲಿಗೆ ಹತ್ತಿರದ ಪ್ರವಾಸಿ ಸ್ಥಳಗಳನ್ನು ನೋಡಲು ಹೊರಟಾಗ ದೂರದಿಂದಲೇ ಅಕರ್ಷಿಸಿದ್ದು ದೊಡ್ಡದೊಂದು ಬೆಟ್ಟ. ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ೨೧೧ ರಲ್ಲಿ ಎಲ್ಲೋರಾ ಕಡೆಗೆ ಹೋಗುವಾಗ ಔರಂಗಾಬಾದ್ ನಗರದಿಂದ ಹದಿನೈದು ಕಿಲೋಮೀಟರ್ ದೂರದಲ್ಲಿ ಈ ಬೆಟ್ಟ ಕೇವಲ ಬೆಟ್ಟವಾಗಿರದೆ ಕೋಟ್ಯಂತರ ಜನರ ನೂರಾರು ಸಾಮ್ರಾಜ್ಯಗಳ, ಕತೆಗಳನ್ನು ಹೇಳಬಹುದಾದ ಕೋಟೆ ಎಂದು ತಿಳಿಯುತ್ತಿದ್ದಂತೆಯೇ, ಎಲ್ಲೋರಾ ಹಾಗೂ ಇನ್ನಿತರ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ಮತ್ತೆ ನೋಡೋಣವೆಂದು ದಿಲೀಪನಿಗೆ ತಿಳಿಸಿ ಕೋಟೆಯ ಕಡೆ ಹೆಜ್ಜೆ ಹಾಕಿದೆವು.
ಹತ್ತು ಘಂಟೆಯ ಸಮಯ ನನಗೆ ಬೆಳಿಗ್ಗೆ ಬೇಗ! ಆದರೆ ಕೋಟೆ ಹತ್ತಲು ಇದು ಬಹಳ ತಡವಾಯಿತು ಎಂದು ನನಗೆ ಅರಿವಾಗುವಷ್ಟರಲ್ಲಿ ತಡವಾಗಿತ್ತು. ಟಿಕೇಟ್ ಕೊಂಡು ಮೊದಲ ಮಹಾದ್ವಾರವನ್ನು ದಾಟಿ ಮಹಾಕೋಟ್ ಸುತ್ತನ್ನು ಪ್ರವೇಶಿಸಿದಾಗ ಈ ಕೋಟೆ ಏರುವುದೇನೂ ಅಂತಹಾ ಕಷ್ಟದ ಕೆಲಸವಿರಲಿಕ್ಕಿಲ್ಲ ಎಂದೆನಿಸಿತು. ಮಧ್ಯಾಹ್ನದ ವೇಳೆ ಅತಿಯಾದ ಧಗೆ ಇರುವುದರಿಂದ ಕೋಟೆಯ ಕೊನೆಯ ತುದಿಯಾದ ಅತೀ ಎತ್ತರದ ಬತೇರಿಯನ್ನು ಆದಷ್ಟು ಬೇಗ ತಲುಪಬೇಕೆಂದುಕೊಂಡೆವು . ಸರಸ್ವತಿ ಮೆಟ್ಟಿಲ ಬಾವಿ,ಆನೆ ಹೊಂಡ, ಭಾರತ್ ಮಾತಾ ಮಂದಿರ, ಚಾಂದ್ ಮಿನಾರ್ ಹಾಗೂ ಮ್ಯೂಸಿಯಂ ನೋಡುವಷ್ಟರಲ್ಲಿಯೇ ಸಾಕಷ್ಟು ಸಮಯ ಕಳೆದು ಹೋಯಿತು. ರಿಪೇರಿ ಕರ‍್ಯ ಪ್ರಗತಿಯಲ್ಲಿದ್ದ ನಿಜಾಮಶಾಹಿ ಅರಮನೆಯನ್ನು ನೋಡಿ, ಮೇಧಾ ಫಿರಂಗಿಯ ಬಳಿ ಫೋಟೋಗಳನ್ನು ಕ್ಲಿಕ್ಕಿಸಿ,ಕಾಲಾ ಕೋಟ್ ಸುತ್ತನ್ನು ಪ್ರವೇಶಿಸುವಾಗಲೇ ಹನ್ನೆರಡು ದಾಟಿದ್ದರಿಂದ ಅಲ್ಲೇ ನೆರಳಲ್ಲಿ ವಿಶ್ರಮಿಸಿ ಕುರುಕಲು ತಿಂಡಿಗಳನ್ನೂ ಮುಗಿಸಿ ಅಗಳನ್ನು ಕಬ್ಬಿಣದ ಸೇತುವೆಯ ಮೂಲಕ ದಾಟಿದೆವು. ಕತ್ತಲಿನ ಹಾದಿಯಲ್ಲಿ ಎಷ್ಟು ಪ್ರಯತ್ನಪಟ್ಟರೂ ಏನೂ ಕಾಣಿಸುತ್ತಿರಲಿಲ್ಲ. ಕನ್ನಡಕವನ್ನು ಕತ್ತಲಲ್ಲಿ ಒಂದೆರಡು ಬಾರಿ ಒರೆಸಿಕೊಂಡಿದ್ದೂ ಅಷ್ಟಾಗಿ ಪ್ರಯೋಜನಕ್ಕೆ ಬರಲಿಲ್ಲ. ನಂತರ ಹದ್ದಿನ ಕಣ್ಣಿನ ದಿಲೀಪನ ಕೈ ಹಿಡಿದುಕೊಂಡು ಮೆಟ್ಟಿಲುಗಳನ್ನು ತಡವುತ್ತಾ ಕತ್ತಲ ದಾರಿ ದಾಟಿ ಹೊರಬರುವಾಗ ಮತ್ತೆ ಬೆಳಕನ್ನು ನೋಡಿ ಅನಿರ್ವಚನೀಯ ಆನಂದವಾಯ್ತು.
ಮುಂದೆ ಮೆಟ್ಟಿಲುಗಳ ಎತ್ತರ ದೊಡ್ಡದಾಗುತ್ತಾ ಬಂದಿದ್ದರಿಂದ , ಮಹಾಕೋಟ್ ಸುತ್ತಿನಲ್ಲಿ ಆರಾಮಾಗಿ ನಡೆದಂತೆ ಇಲ್ಲಿ ನಡೆಯುವುದೂ ಸಾಧ್ಯವಾಗುತ್ತಿರಲಿಲ್ಲ.
ಬಿಸಿಲ ಜಳದಿಂದ ಮೈಯಲ್ಲಿರುವ ನೀರಿನಂಶವೆಲ್ಲಾ ಆವಿಯಾಗುತ್ತಿದ್ದಾಗ ಗಣೇಶನ ಗುಡಿಯೇ ನಮಗೆ ದಿಕ್ಕಾಯ್ತು. ಮಂಟಪದ ಅರಮನೆಯು ದೂರದಿಂದಲೇ ಕಾಣುತ್ತಿದ್ದರೂ ಅದರೊಳಗಡೆ ಹೋದ ನಂತರ ಅದರ ಸುಂದರ ಒಳಾಂಗಣ ಹಾಗೂ ಎಲ್ಲದಕ್ಕಿಂತಲೂ ಹೆಚ್ಚಾಗಿ ವಿಶ್ರಮಿಸಲು ಸಾಕಷ್ಟು ಸ್ಥಳಾವಕಾಶ ನಮ್ಮನ್ನು ಮುದಗೊಳಿಸಿತು. ಮುಕ್ಕಾಲು ಘಂಟೆ ವಿಶ್ರಮಿಸಿದ ನಮಗೆ ಇನ್ನೂ ನಮ್ಮ ಗುರಿ ದೂರವಿದೆ ಎಂದು ನೆನಪಾಗಿ ತುತ್ತತುದಿಯ ಬತೇರಿಯ ಕಡೆಗೆ ಸಾಗಿದೆವು.
ಕೊನೆಯ ಬತೇರಿಯ ಬಳಿ ಮೆಟ್ಟಿಲುಗಳನ್ನು ಹತ್ತುತ್ತಿದ್ದಾಗ ಎರಡು ಕಾಲುಗಳಲ್ಲದೇ; ಕೈಗಳನ್ನೂ ನೆಲಕ್ಕೆ ಊರಿ ಗೋರಿಲ್ಲಾದಂತೆ ನಡೆಯುತ್ತಿದ್ದ ನನ್ನನ್ನು ನೋಡಿ, ಕಚ್ಚೆ ಸೀರೆ ಉಟ್ಟ ಮಹಾರಾಷ್ಟçದ ಮಧ್ಯವಯಸ್ಸಿನ ಹೆಂಗಸರು ಬತೇರಿಯಿಂದ ಕೆಳಗಿಳಿಯುತ್ತಾ ನಗುತ್ತಿದ್ದರು. ಆ ಸುಡು ಬಿಸಿಲಿನಲ್ಲಿ ಬತೇರಿಯ ತುದಿ ಏರಿನಿಂತಾಗ ಇಡೀ ಕೋಟೆಯನ್ನೇ ಗೆದ್ದೆವೆನ್ನುವಷ್ಟು ಖುಷಿ, ಸುತ್ತಲ ದೃಶ್ಯಗಳನ್ನು ಕಣ್ತುಂಬಿಸಿಕೊಂಡೆವು
ವಾಪಾಸು ಕೋಟೆ ಇಳಿಯುವುದು ಮೊದಲಿಗೆ ಸುಲಭವೆನಿಸಿದರೂ ಮೊಣಕಾಲು ಗಂಟಿನೊಳಗಿದ್ದ ಲಿಗಮೆಂಟುಗಳಿಗೆ ತ್ರಾಸಾಗದಂತೆ ನಿಧಾನಕ್ಕೆ ಇಳಿಯುವುದು ಕಷ್ಟಕರವೇ ಆಗಿತ್ತು.
ರಾಜ ಮಹಾರಾಜರ ಸಿನಿಮಾದಲ್ಲಿರುವಂತೆ ದಾರಿಯಲ್ಲೆಲ್ಲಾ ಜನರು ಓಡಾಡುತ್ತಿರುವಂತೆ, ಕಟ್ಟೆಗಳ ಮೇಲೆ ಜನರು ವಿಶ್ರಮಿಸುತ್ತಿರುವಂತೆ, ಬತೇರಿಯ ಮೇಲೆ ಸೈನಿಕರು ಪಹರೆ ಕಾಯುತ್ತಿರುವಂತೆ ಕಲ್ಪಿಸಿಕೊಳ್ಳುತ್ತಾ ಕೋಟೆಯಿಂದ ಹೊರನಡೆದೆವು. ಮತ್ತೊಮ್ಮೆ ಕೋಟೆ ನೋಡಲು ಬಂದಾಗ ಹೆಚ್ಚು ಸಮಯ ಮೀಸಲಿರಿಸಿಕೊಂಡು ಬರಬೇಕು ಎಂದುಕೊಳ್ಳುತ್ತಾ ಹಸಿದ ಹೊಟ್ಟೆಗೆ ಹಿಟ್ಟು ತುಂಬಿಸಲು ಹೋಟೆಲ್ ಕಡೆಗೆ ಹೊರಟೆವು.
-ದೀಪಕ್ ಡೋಂಗ್ರೆ. ಶಿವಮೊಗ್ಗ
Comments
Post a Comment