ಗತಕಾಲದ ಕತೆ ಹೇಳಿದ ವಿನಾಯಕ ರೇಡಿಯೋ ಸರ್ವಿಸ್

    ಗತ ಕಾಲದ ಕತೆ ಹೇಳಿದ ವಿನಾಯಕ ರೇಡಿಯೋ ಸರ್ವಿಸ್

    ಸಂಸ್ಕೃತಿ ಅಧ್ಯಾಯನ ಅಂದ ತಕ್ಷಣ ನಮಗೆಲ್ಲ ನಮ್ಮ ದೇಶದ ವೈವಿಧ್ಯಮಯ ಸಂಪ್ರದಾಯಗಳು, ಆಚರಣೆಗಳು ಕಣ್ಣ ಮುಂದೆ ಹಾಡು ಬರುತ್ತದೆ. ಹಬ್ಬ ಹರಿದಿನಗಳು, ವಿವಿಧ ದಿರಿಸುಗಳು, ಯಕ್ಷಗಾನ, ಕೋಲಾಟ, ಕುಚುಪುಡಿ ಭರತ ನಾಟ್ಯಗಳು 'ಸಾಂಸ್ಕೃತಿಕ' ಅನ್ನುವ ಪದದ ಜೊತೆಗೆ ತಳುಕು ಹಾಕಿಕೊಂಡು ಕಣ್ಮುಂದೆ ಕುಣಿಯುತ್ತದೆ, ಇದೆಲ್ಲವೂ ನಿಜ ಕೂಡ ಹೌದು. 



    ಆದರೆ ಸಂಸ್ಕೃತಿ ಎಂದರೆ ನಮ್ಮ ದಿನ ನಿತ್ಯದ ಜೀವನವು ಹೌದು ಎಂದರೆ ನಿಮಗೆ ಆಶ್ಚರ್ಯವೆನಿಸಬಹುದು. ನಾವು ದಿನನಿತ್ಯದ ಬದುಕಿನಲ್ಲಿ ಎದುರಿಸುವ ಸಂಗತಿಗಳು, ಆಚರಣೆಗಳು , ನಮ್ಮ ಅಭಿರುಚಿ, ಆಸಕ್ತಿಗಳು, ಹವ್ಯಾಸ, ಟೈಮ್ ಪಾಸ್ ಗಳು ಇವೆಲ್ಲವೂ ಸಾಂಸ್ಕೃತಿಕ ಅಧ್ಯಯನದ ಭಾಗ ಮಾತ್ರವಲ್ಲದೆ ಸಂಸ್ಕೃತಿಯನ್ನು ವಿವರಿಸುವ ವಿಚಾರಗಳೂ ಹೌದು, ಅಧ್ಯಯನಕ್ಕೆ ವಿಷಯವೂ ಹೌದು. ಸ್ವಲ್ಪ ವಿವರಿಸಬೇಕೆಂದರೆ, ನೀವು ವಾಟ್ಸ್ ಆಪ್ ಗುಂಪುಗಳಲ್ಲಿ ಬಂದಿರುವ ಶೇರ್ ಆಗಿರುವ ಕೆಲವೊಂದು ಹಳೆಯ ನೆನಪುಗಳನ್ನು ವಿವರಿಸುವ ವಿಡಿಯೋಗಳನ್ನ ನೋಡಿರಬಹುದು. ಅಲ್ಲಿ ನೀವು ಬಾಲ್ಯದ ದಿನಗಳಲ್ಲಿ ಕಂಡಿದ್ದ ಪೆಪ್ಪರ್ಮೆಂಟಿನ ಚಿತ್ರ, ಐಸ್ ಕ್ಯಾಂಡಿಯ ರುಚಿ, ಆಟೋಟಗಳ ನೆನಪುಗಳನ್ನು ಮೆಲುಕು ಹಾಕಿರುತ್ತೀರಿ. ಸ್ವಚ್ಚಂದವಾಗಿ ಸುತ್ತಾಡುತ್ತ ಮರಗಿಡಗಳಲ್ಲಿ ಹೆಕ್ಕಿ, ಕಿತ್ತು ತಿಂದ ಹಣ್ಣು ಕಾಯಿಗಳನ್ನ ನೆನಪಿಸಿಕೊಂಡಿರುತ್ತೀರಿ. ಅದೇ ರೀತಿ, "ಈಗ ಚಣ್ಣೆ ಮಣೆ ಆಟಾನೇ ಇಲ್ಲ, ಎಲ್ಲರು ಮೊಬೈಲಲ್ಲೇ ಮುಳುಗಿರುತ್ತಾರೆ" ಅಂತಾನೂ ಬೇಸರಿಸಿಕೊಂಡಿರುತ್ತೀರಿ. 




ಈ ಹಳೆಯ ನೆನಪುಗಳು ಅಂದಿನ ನಮ್ಮ ಜೀವನದ ಭಾಗವೇ ಆಗಿದ್ದವು, ಇಂದಿನ ಯುಗಾಂತರದ ಕಾಲದಲ್ಲಿ ಅಂದಿನ ನೆನಪುಗಳನ್ನು ಚಪ್ಪರಿಸಿ ಹೇಳುವಾಗ ಹೇಳುವವರ ಅನುಭವಗಳನ್ನ ದಾಖಲಿಸಿಡದಿದ್ದರೆ ಮುಂದಿನ ಪೀಳಿಗೆಗೆ ಹಳೆಯ ವಸ್ತುಗಳು  ಕೇವಲ ಮ್ಯೂಸಿಯಂನೊಳಗಿರುವ ಗುಜರಿಯಂತೆ ಕಂಡರೂ ಆಶ್ಚರ್ಯವಿಲ್ಲ. 




ಹಿಂದೊಮ್ಮೆ ರೇಡಿಯೋ ಹಾಡಲು ದೊಡ್ಡದಾದ ಆಂಟೆನಾ ಮಾಡಿನ ಮೇಲೆ ಸಿಕ್ಕಿಸಿಡಬೇಕಾಗಿತ್ತು ಎಂದರೆ ನೀವು ಆಶ್ಚರ್ಯಪಡುತ್ತೀರಿ. ತರಂಗಾಂತರಗಳನ್ನು ಉಪಯೋಗಿಸಿ ಹಾಡುವ ರೇಡಿಯೋಗೆ ಅಂದು ಲೈಸೆನ್ಸ್ ಕಡ್ಡಾಯವಾಗಿತ್ತು ಎಂಬುದು ನಿಮಗೆ ಗೊತ್ತೇ? ಈ ಲೈಸೆನ್ಸ್ ವರ್ಷದಿಂದ ವರ್ಷಕ್ಕೆ ರಿನೀವಲ್ ಕೂಡ ಆಗಬೇಕಿತ್ತಂತೆ! ಇನ್ನು ಎತ್ತಿನ ಗಾಡಿಯ ಬಿಲ್ಲೆ, ಸೈಕಲ್ಲಿಗೆ ಲೈಟು ಕಡ್ಡಾಯವಾಗಿತ್ತು ಎನ್ನುವುದೂ  ಹಳೆಯ ಕತೆಗಳು, ಈಗಿನ ಹುಡುಗರಿಗೆ ಈ ಕತೆ ಹೇಳಿದರೆ ನಕ್ಕಾರು!



ಹೀಗೆ ಬದಲಾಗುತ್ತಿರುವ ಸಮಯದಲ್ಲಿ ಜನರ ಜೀವನ ಶೈಲಿ, ಉಪಯೋಗಿಸುವ ವಸ್ತುಗಳು ಬದಲಾಗುತ್ತಿರುತ್ತದೆ. ಇಂದಿನ ಮೊಬೈಲ್ ಯುಗದಲ್ಲಿ ಬೆರಳತುದಿಯಲ್ಲಿ ಪ್ರಪಂಚದೆಲ್ಲೆಡೆಯ ಹಾಡುಗಳೂ, ವಿವರಗಳೂ ಉಲಿಯಲು ಕಾದು ಕುಳಿತಿರುವಾಗ ಗ್ರಾಮಾಫೋನಿನ ಕೀಲಿಕೈ ತಿರುಗಿಸುವ ತಾಳ್ಮೆ ಯಾರಿಗಿದೆ? ಕ್ಯಾಸೆಟ್ಟಿನ ರೀಲನ್ನು ರೆನಾಲ್ಡ್ಸ್ ಪೆನ್ನಿನ ಕ್ಯಾಪಿನಲ್ಲಿ ತಿರುಗಿಸುವ ಶ್ರದ್ಧೆ ಯಾರಿಗಿದೆ? ಹಾಗಂತ ಈ ನಿರ್ಜೀವ ವಸ್ತುಗಳನ್ನು ನಿರುಪಯುಕ್ತವೆಂದು ಎಸೆದುಬಿಡೋಣವೇ? ಬೇಡ, ಕೊನೆ ಪಕ್ಷ ನಮ್ಮ ಮನೆಯಲ್ಲಿ ಸಾವಿರಾರು ನೆನಪುಗಳನ್ನು ಹೊತ್ತ ಈ ವಸ್ತುಗಳನ್ನು ಇಡಲೂ ಜಾಗವಿಲ್ಲದಷ್ಟು ನಿರ್ಭಾವುಕರಾಗುವವರೆಗಾದರೂ ಅವುಗಳನ್ನು ಕಾಪಾಡಿಕೊಳ್ಳೋಣ. ಏಕೆಂದು ಹೇಳುತ್ತೇನೆ ಕೇಳಿ. 

ಟಿ.ವಿ. ಸ್ಟಾಂಡ್ ಮೇಲೆ ಶೋ ಕೇಸ್ನಲ್ಲಿ ನೀವಿಟ್ಟ ಹಳೆಯ ಟೇಪ್ ರೆಕಾರ್ಡರ್, ಗ್ರಾಮಫೋನ್ ಸರಿಸುಮಾರು ಅರ್ಧ ಶತಮಾನದ ಕತೆ ಹೇಳುತ್ತದೆ, (ವಿನಾಯಕ ರೇಡಿಯೋ ಸರ್ವಿಸ್ ನಂತೆ), ನೂರಾರು ವರ್ಷಗಳ ತಂತ್ರಜ್ಞಾನದ ಬೆಳವಣಿಗೆಗೆ ಕನ್ನಡಿ ಹಿಡಿಯುತ್ತದೆ. ಬೆರಳೊಳಗದ್ದಿ ತೀಡಿ ನಂಬರ್ ಡಯಲಿಸುತ್ತಿದ್ದ ಆ ಹಳೆಯ ಟೆಲಿಫೋನ್ ದೂರದವರನ್ನ ಕೂಗಿ ಮಾತನಾಡಿಸಿ ಹತ್ತಿರವಾಗಿಸಿಕೊಂಡ ಕತೆಯನ್ನು ಬಿಚ್ಚಿಡುತ್ತದೆ. ಇವುಗಳೇ ಆ ಕಾಲದ ನಿಜವಾದ ಇತಿಹಾಸ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಜನಸಾಮಾನ್ಯರ ಆಚರಣೆಗಳು, ಈ ಆಚರಣೆಗಳೇ ನಮ್ಮ ಸಂಸ್ಕೃತಿಯನ್ನು ಸೂಚಿಸುವ ವಿಷಯಗಳು. 

ಪೊಲಾರೈಡ್ ಕ್ಯಾಮೆರಾ ಕ್ಲಿಕ್ಕಿಸಿದ ನಿಮಿಷದೊಳಗಾಗಿ ಫೋಟೋ ಪ್ರಿಂಟು ಕೈಗೆ ಬರೋದು ಈಗಿನ ಕಾಲಕ್ಕೆ ದೊಡ್ಡ ವಿಷಯವಾಗಿಲ್ಲದಿರಬಹುದು, ಆದರೆ ಇಪ್ಪತ್ತು ಇಪ್ಪತ್ತೈದು ವರ್ಷಗಳ ಹಿಂದೆ ನಮಗದು ಜಗತ್ತಿನ ಹತ್ತನೆಯ ಅದ್ಭುತವೇ ಸರಿ.  ರೀಲು ಜೋಡಿಸಿ ಕ್ಲಿಕ್ಕಿಸಿದ ಫೋಟೋಗಳೆಷ್ಟೋ, ಸರಿಯಾಗಿ ಬೆಳಕು ಕಂಡ ಚಿತ್ರಗಳೆಷ್ಟೋ ಗೊತ್ತಾಗುತ್ತಿದ್ದದ್ದು ಲ್ಯಾಬಿನಿಂದ ಪ್ರಿಂಟ್ ಆಗಿ ಹೊರಬಂದ ನಂತರವಷ್ಟೇ ಆದರೆ ಈಗ, ಮೊಬೈಲ್ ನಿಂದ ತೆಗೆದ ಫೋಟೋಗೆ ಫೋನೇ  ಅಲಂಕಾರ ಮಾಡಿ, ಕನ್ನಡಕ ಹಾಕಿ, ಬೆಳ್ಳಗೆ ಮಾಡಿ, ಹುಬ್ಬು ಮೀಸೆ ತೀಡಿ, ಕಣ್ ಕಪ್ಪು ಹಚ್ಚಿ ತೋರಿಸುತ್ತದೆ. 


ಸರಿಸುಮಾರು ೫೦ ವರ್ಷಗಳ ಕಾಲ ಶೃಂಗೇರಿಯ ಭಾರತಿ ಬೀದಿಯಲ್ಲಿ ರೇಡಿಯೋ ರಿಪೇರ್ ಶಾಪ್ ನಡೆಸಿದ ಕೀರ್ತಿ ರೇಡಿಯೋ ಗಣೇಶ್ ಡೋಂಗ್ರೆ, ರೇಡಿಯೋ ಭಟ್ರು ಅಥವಾ ಜೀಪ್ ಭಟ್ರು ಎಂದೇ ಜನರಿಗೆ ಚಿರಪರಿಚಿತರಾಗಿರುವ ಇವರಿಗೆ ಸಲ್ಲಬೇಕು. ರೇಡಿಯೋ, ಟೇಪ್ ರೆಕಾರ್ಡರ್, ಲೈಟುಗಳು, ಆಂಪ್ಲಿಫೈರ್ ಗಳು, ಮ್ಯೂಸಿಕ್ ಪ್ಲೇಯರ್ಗಳು, ಜನರೇಟರ್ ರಿಪೇರಿ ಹಾಗು ಇನ್ನಿತರೇ ಸಣ್ ಪುಟ್ಟ ಎಲೆಕ್ಟ್ರಾನಿಕ್ ಉಪಕರಣಗಳ ರಿಪೇರಿ ಮಾಡೋದ್ರಲ್ಲಿ ಇವರು ಶೃಂಗೇರಿಯ ಸುತ್ತಮುತ್ತಲಿನ ಜನರಿಗೆ ಚಿರಪರಿಚಿತರು. ಈ ರೇಡಿಯೋ ಶಾಪಿನ ಹೆಸರು ವಿನಾಯಕ ರೇಡಿಯೋ ಸರ್ವಿಸ್ ಅಂತ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ ಯಾಕಂದ್ರೆ ಈ ಬೋರ್ಡ್ ಅಂಗಡಿಯ ಹೊರಗೆ ನೇತು ಹಾಕಿರದೆ ಅಂಗಡಿಯ ಒಳಗೆ ಮೂಲೆಯಲ್ಲಿ ಹಳೆ ರೇಡಿಯೋದ ಜೊತೆಗೆ ಕುಳಿತಿತ್ತು. 



ಬದಲಾಗುತ್ತಿರುವ , ಬದಲಾದ ತಾಂತ್ರಿಕ ಅಭ್ಯುದಯಗಳಿಗೆ (?) ಪಕ್ಕ ನಿಂತು ಸಾಕ್ಷಿ ಹೇಳುವ, ಬದಲಾದ ಜೀವನಶೈಲಿಯ ಕತೆ ಹೇಳುವ ಅಂಗಡಿಯೇ ಈ ರೇಡಿಯೋ ಶಾಪ್. ಸಣ್ಣ ಗೂಡಂಗಡಿಯಷ್ಟು ಜಾಗ, ಎರಡು ಸಣ್ಣ ಟೇಬಲ್, ಎರಡು ಸ್ಟೂಲು , ಒಂದು ಶೋಕೇಸು ಇವಿಷ್ಟೇ ಅಂಗಡಿಯೊಳಗಿದ್ದ ಫರ್ನಿಚರ್ರುಗಳು ಆದರೆ ಇದೆ ಶಾಪ್ ವ್ಯಾಕ್ಯೂಮ್ ಟ್ಯೂಬಿನಿಂದ ಗೊರಗೊರ ಹಾಡುತ್ತಿದ್ದ ವಾಲ್ ರೇಡಿಯೋದಿಂದ ಹಿಡಿದು ಇತ್ತೀಚಿನ ಪೆನ್ ಡ್ರೈವ್ ನಿಂದ ಹಾಡುವ ಮ್ಯೂಸಿಕ್ ಪ್ಲೇಯರ್ಗಳ ವರೆಗೆ ಎಲ್ಲಾ ಬದಲಾವಣೆಯ ತಿರುವುಗಳನ್ನೂ ಪರ್ವವನ್ನೂ ನೋಡಿದೆ. 

ಹತ್ತಾರು ವ್ಯಾಕ್ಯೂಮ್ ಟ್ಯೂಬ್ ಗಳನ್ನ ಹೊತ್ತ ಗಜಗಾತ್ರದ (ಟಿವಿ ಗಾತ್ರದ) ವಾಲ್ ರೇಡಿಯೋ, ಅದಕ್ಕೆ ಚುಚ್ಚಿಕೊಂಡ ವೈರು, ಮಾಡು ದಾಟಿ ಆಕಾಶಕ್ಕೆ ಚಾಚಿ ನಿಂತಿರುವ ಆಂಟೆನಾ, ಆಕಾಶ ವಾಣಿಯ ಕಾರ್ಯಕ್ರಮ ಕೇಳಲು ಊರಲ್ಲಿ ಉಳ್ಳವರ ಮನೆಯಲ್ಲಿ ಬಂದು ಸೇರುವ ಊರು ಮನೆಯ ಮಂದಿ, ಅವರ ಜೊತೆಗೆ ಪರಿಚಯದ ನಗು, ಒಂದಿಷ್ಟು ಹರಟೆ, ಆತಿಥ್ಯ, ಉಭಯ ಕುಶಲೋಪರಿ ಇವೆಲ್ಲ ಈಗಿನ ಕೋರೋನ ಸಂಕಷ್ಟದ ಸಮಯದಲ್ಲಿ ನಮ್ಮ ಮನೆಗಳಲ್ಲಿ ಕಲ್ಪಿಸಿಕೊಳ್ಳಲೂ  ಸಾಧ್ಯವಿಲ್ಲ. 



ವಾಲ್ ರೇಡಿಯೋದಿಂದ ಟ್ರಾನ್ಸಿಸ್ಟರ್ ರೇಡಿಯೋಗೆ ಸ್ಥಿತ್ಯಂತರಗೊಂಡಾಗ ಸ್ಥಿತಿವಂತರ ಮನೆಗಳನ್ನೂ ದಾಟಿ ಎಲ್ಲರಿಗು ದಕ್ಕುವ ವೈಭೋಗವಾಯ್ತು ರೇಡಿಯೋ. ಮನೆಗಳಲ್ಲಿ ರೇಡಿಯೋ ಟ್ಯೂನ್ ಮಾಡೋದೇ ಒಂದು ಸೌಭಾಗ್ಯ , ಇದಲ್ಲದೆ ಪೇಟೆಗೆ ಹೋಗುವಾಗ, ತಿರುಗಾಟವಿದ್ದಾಗ ಕೈ ಚೀಲದೊಳಗೆ ಚರ್ಮದ ನಿಲುವಂಗಿ ತೊಟ್ಟು ಬೆಚ್ಚಗೆ ಕುಳಿತಿರುತ್ತಿತ್ತು ಈ ಸಣ್ಣನೆಯ ಟ್ರಾನ್ಸಿಸ್ಟರ್. 



ಟ್ರಾನ್ಸಿಸ್ಟರ್ ನಿಂದ ಟೇಪ್ ರೆಕಾರ್ಡರ್ಗೆ ಬದಲಾವಣೆಯಾಗಲು ಸಾಕಷ್ಟು ಸಮಯವೇನು ಹಿಡಿಯಲಿಲ್ಲ. ವೈಯಕ್ತಿಕ ಆಯ್ಕೆಯ ಸ್ವತಂತ್ರವನ್ನು, ಸೌಲಭ್ಯವನ್ನು ಈ ಉಪಕರಣ ನೀಡಿತು. ನಂತರದಲ್ಲಿ ಬಂಡ ಡೆಕ್ ಗಳು ಕಾರ್ ಸ್ಟೀರಿಯೋಗಳು ಆಂಪ್ಲಿಫೈಯರ್ ಗಳು ಇವೆಲ್ಲ ರೇಡಿಯೋ ಶಾಪ್ ನೋಡಿದ ಇನ್ನಿತರ ಸಾಂಸ್ಕೃತಿಕ ರಾಯಭಾರಿಗಳು. 

ಇಲ್ಲಿ ರೇಡಿಯೋ ಶಾಪ್ ಗೆ ರಿಪೇರಿಗಾಗಿ ಬಂದ ಒಂದೊಂದು ರೇಡಿಯೋಗಳೂ, ಉಪಕರಣಗಳೂ ಒಂದೊಂದು ಕತೆಯನ್ನು ಹೇಳುತ್ತದೆ. ಹಳ್ಳಿಯ ಕತೆಯನ್ನ ಜೀವನ ಶೈಲಿಯನ್ನ ಒಂದಿಡೀ ಪೀಳಿಗೆಯ ಕತೆಗಳನ್ನು, ಗ್ರಾಮಾಯಣಗಳನ್ನು ಸೆರೆಹಿಡಿದ ಈ ವಸ್ತುಗಳೀಗ ಶೆಲ್ ಖಾಲಿಯಾಗಿ ಕತೆ ಹೇಳದ ಸ್ಥಿತಿಯಲ್ಲಿ ಬಿದ್ದಿವೆ. 

ತಂತಿಗಳಲ್ಲಿ ಹರಿಯುವ ಎಲೆಕ್ಟ್ರಾನುಗಳ ಜತೆಗೆ ಚೆಲ್ಲಾಟವಾಡುತ್ತ , ಬೋರ್ಡುಗಳಲ್ಲಿ ನುಗ್ಗುವ ಜುಮ್ ಜುಮ್ ಕರೆಂಟಿನೊಟ್ಟಿಗೆ ವಾದಕ್ಕಿಳಿಯುವ, ಅಡೆತಡೆಗಳನ್ನು ನಿವಾರಿಸಿ, ಮುಷ್ಟಿಗಾತ್ರದ ಸಾಲ್ಡರಿಂಗ್ ಗನ್ ನ ಹಿಡಿಕೆಯನ್ನು ಹಿಡಿದು, ಒಡೆದು ಹೋದ ಪಾರ್ಟುಗಳನ್ನು ಬೆಸುಗೆ ಹಾಕಿ ಸೇರಿಸುವ ಕೈಗಳು ಇಂದು ನಿವೃತ್ತಿಯ ಜೀವನವನ್ನು ನಡೆಸುತ್ತಿದೆ. ರಿಪೇರಿ ಖರ್ಚಿಗಿಂತ ಸ್ವಲ್ಪ ದುಡ್ಡು  ಜಾಸ್ತಿ ಕೊಟ್ಟರೆ ಹೊಸ ವಸ್ತುಗಳೇ ಸಿಗುವಾಗ ರಿಪೇರಿ ಯಾರು ಮಾಡಿಸುತ್ತಾರೆ ಅನ್ನೋದು ಗಣೇಶ್ ಡೋಂಗ್ರೆ ಅವರ ಬೇಸರದ ನುಡಿ. ಹಾಗಂತ  ಇಷ್ಟು ವರ್ಷದವರೆಗೆ ಸಂಪಾದನೆ ಆಗಿಲ್ಲವೆಂದಲ್ಲ. 

ಜಾಗತೀಕರಣದ ಅಲೆಗೆ ಪ್ರಪಂಚದ ತಂತ್ರಜ್ಞಾನವೆಲ್ಲ ನಮ್ಮ ಮನೆಯ ಅಂಗಳದಲ್ಲಿ ಮಂಡಿಯೂರಿ ಕುಳಿತಿದೆ. ಆದರೆ ತಂತ್ರಜ್ಞಾನ ಬೆಳೆದಂತೆ ಅದರ ಬಿರುಗಾಳಿಯ ವೇಗಕ್ಕೆ ಸಾಂಪ್ರದಾಯಿಕ ಕೆಲಸಗಳು ಹಲವು ಮೂಲೆಗುಂಪಾಗಿದೆ. ಎಷ್ಟೋ ದಿನನಿತ್ಯದ ಜೀವನ ಶೈಲಿಗಳು ಮಾಯವಾಗಿಬಿಟ್ಟಿದೆ. ಇದು ಬದಲಾದ ಸಂಸ್ಕೃತಿಯ ಸೂಚಕವೂ ಹೌದು. 


ನೀವು ಈ ಹಿಂದೆ ಹಲವು ವರ್ಷಗಳ ಹಿಂದೆ ರಿಪೇರಿಗೆ ಕೊಟ್ಟ ರೇಡಿಯೋ ಈಗ ಗಣೇಶ್ ಡೊಂಗ್ರೆಯವರ ಮನೆಯಲ್ಲಿ ಸಿಗದಿರಬಹುದು ಆದ್ರೆ ಶೃಂಗೇರಿಯ ಅಂಗಡಿ ಖಾಲಿ ಮಾಡಿದ್ರೂ ಸಹ ಅವರು ಸಣ್ಣ ಪುಟ್ಟ ರಿಪೇರಿಗೆ ಹಾಗು ನಿಮ್ಮ ಜೊತೆ ಮಾತುಕತೆಗೆ ಮೆಣಸೆಯ ಮನೆಯಲ್ಲಿ  ಸಿಗುತ್ತಾರೆ. 

ಐದು ದಶಕಗಳ ಯುಗಾಂತರದ ಕತೆ ಹೇಳಿದ ಶೃಂಗೇರಿಯ ವಿನಾಯಕ ರೇಡಿಯೋ ಸರ್ವಿಸ್ ಈಗ ಮುಚ್ಚಿದೆ ಆದರೆ ಕತೆ ಹೇಳಿಸಿದ ಗಣೇಶ ಡೋಂಗ್ರೆಯವರು ನಿಮಗೆ ಇನ್ನೂ ಹಲವು ಕೌತುಕದ ಕತೆ ಹೇಳಬಲ್ಲರು, ಚರ್ಚೆ ಮಾಡಬಹುದು ಒಮ್ಮೆ ಭೇಟಿ ಮಾಡಿ. 



Comments

Popular posts from this blog

ಕುರುಡು ಮಂತ್ರ -ಪದ್ಮನಾಭ ಆಗುಂಬೆ ಅವರ ಕಾದಂಬರಿ ಬಗ್ಗೆ ನನ್ನ ಲೇಖನ.

ಸ್ಪೆಷಾಲಿಟಿ