ಮರಳಿ ಬರುವೆನು ಗೂಡಿಗೆ
ಮರಳಿ ಬರುವೆನು ಗೂಡಿಗೆ
ಬೀಸುವ ಗಾಳಿಯ ಮೊರೆತದಲಿ
ಕೇಳಿದ ಹಾಗಿದೆ ಆ ಹೆಸರು.
ನೋವಲಿ ಹತ್ತಿದ ಕಿಡಿ ಆಗ.
ದೂರದಲಿ ಉಳಿದೆ ನಾನೀಗ
ಉರಿಯುತಿದೆ ಮೈಯಲ್ಲಿ ಉರಿಯಾಗಿ.
ನೋವಿದು ಉಳಿದಿದೆ ಎಂದೆಂದೂ
ಮರಳಿ ಬರುವೆನು ಗೂಡಿಗೆ
ಊರಿನ ಗಾಳಿಯ ತಂಪಿನ್ನೂ
ಮೈಯನು ಸೋಕಿದ ಹಾಗಿದೆ
ಮಣ್ಣಿನ ಪರಿಮಳ ಮಳೆಯಲ್ಲಿ
ಎದೆಯಲಿ ಬೆಚ್ಚಗಿದೆ ಹಸಿರಾಗಿ
ದೂರದ ಊರಲಿ ಹೆಸರೇನು
ಹಣವೇನು ಮನೆಯೇನು
ನಾನು ನನ್ನವರು ಎನ್ನೋದು
ಉಳಿಯೋದು ಊರಲಿ ಮಾತ್ರ.
ಮರಳಿ ಬರುವೆನು ಗೂಡಿಗೆ
ಅಲ್ಲಿದೆ ನಮ್ಮನೆ. ಇಲ್ಲಿರೋದು ಸುಮ್ಮನೆ.
ತುತ್ತಿನ ಚೀಲದ ಹಸಿವೆಯನು
ನೀಗಿಸೋ ಕಾರಣ ಈ ದೂರ.
ಇಲ್ಲಿಯ ಪರಮಾನ್ನ ಮ್ರುಷ್ಟಾನ್ನಕಿಂತ.
ಊರಿನ ಗಂಜಿಯ ರುಚಿ ಹೆಚ್ಚು.
ಇಲ್ಲಿಯ ಏಸಿಯ ತಂಪಲ್ಲಿ
ಊರಿನ ಗಾಳಿಯ ಕಂಪೆಲ್ಲಿ?
ಊರಿನ ಹಾದಿ ಬೀದಿಗಳಲಿ
ಹರಕಲು ಚೆಡ್ಡಿಯಲಿ ನಾನಲೆವೆ
ಇಲ್ಲಿಯ ಹೈವೇ ರಸ್ತೆಯಲಿ
ಇಸ್ತ್ರಿಯ ಬಟ್ಟೆಯ ಗೆರೆ ಬೇಕೆ?
ಊರಲಿ ಉಳಿದಿರೋ ಜನರೆಲ್ಲಾ
ಕೇಳಿರಿ ನಿಜದ ಮಾತೊಂದ
ದೂರದ ಬೆಟ್ಟವು ನುಣ್ಣಗಿದೆ
ನೀವಿರೋ ಬೆಟ್ಟದಲಿ
ತಾಯಿಯ ಮಡಿಲಿನ ನೆಮ್ಮದಿಯಿದೆ.
ಮರಳಿ ಬರುವೆನು ಗೂಡಿಗೆ
ತುಂಗೆಯ ನೀರಲಿ ಈಜುವೆನು
ಮರಳಿನ ಬಿಸಿಯಲಿ ಹೊಳಕುವೆನು
ಮಾವಿನ ಮರಗಳ ಏರುವೆನು
ಅಟ್ಲಾಸ್ ಸೈಕಲ್ ತುಳಿಯುವೆನು
ಸುರಿಯುವ ಮಳೆಯಲಿ ಆಟ
ಕಾಡಿನ ನಡುವೆ ಊಟ
ತಂದೆಯು ಹೇಳುವ ಪಾಠ
ತಾಯಿಯ ಪ್ರೀತಿಯ ನೋಟ.
ಮರಳಿ ಬರುವೆನು ಗೂಡಿಗೆ
ಸಾಕು ಇದಿಷ್ಟೂ ಸದ್ಯಕ್ಕೆ.
ಊರಿನ ಖುಷಿಯ ಎದುರೆಲ್ಲ
ಇಲ್ಲಿನ ವೈಭವ ಯಾಕೆಲ್ಲ?
Comments
Post a Comment