ನಸೀಮ ಬೀಡಿ ನಜೀರ್ ಸಾಬ್

                   ನಮ್ಮೂರ ನಸೀಮ ಬೀಡಿ ನಜೀರ್ ಸಾಬ್ ರ ಕತೆ ಇಂತಿದೆ. ನಜೀರ್ ಸಾಬರು ಒಳ್ಳೆಯ ವ್ಯಕ್ತಿ ಎಲ್ಲರಿಗೂ ಬೇಕಾದಂತಹ ಮನುಷ್ಯ. ಆತನಿಂದ ಕೆಲಸ ಮಾಡಿಸಿಕೊಳ್ಳದ ವ್ಯಕ್ತಿ ನಿಮಗೆ ಬಹುಷಃ ಊರಲ್ಲಿ ಯಾರೂ ಸಿಕ್ಕುವುದು ಕಷ್ಟ. ನಜೀರ್ ಸಾಬರಿಗೆ ಗೊತ್ತಿಲ್ಲದ ಕೆಲಸ ಏನು ಎಂದರೆ ಅದಕ್ಕೂ ಉತ್ತರ ಸಿಕ್ಕುವುದು ಕಷ್ಟ.
                    ನಜೀರ್ ಸಾಬರದ್ದು ಸಮಯಾವಲಂಬಿ ಉದ್ಯೋಗ. ಮಳೆಗಾಲದಲ್ಲಿ ಹಪ್ಪಳ ಸಂಡಿಗೆ ಮಾರುವುದು, ರಾತ್ರಿ ಹೊತ್ತು ಗದ್ದೆಗೆ ಹೋಗಿ ಮೀನು ಕಡಿದು ತಂದು ಮಾರುವುದು, ಗದ್ದೆ ಅಂಚು ಕಡಿಯುವುದು, ಚಳಿಗಾಲದಲ್ಲಿ ಹಾಸಿಗೆ ರಿಪೇರಿ, ಗುಜರಿ ಸಂಗ್ರಹಿಸುವುದು, ತೋಟದ ಕೆಲಸದಲ್ಲಿ ಸಹಾಯ ಮಾಡೋದು, ಅಡಿಕೆ ಸುಲಿಯೋದು. ಬೇಸಿಗೆಯಲ್ಲಿ ಕಟ್ಟಿಗೆ ಕಡಿಯೋದು, ದರಗು ಗುಡಿಸೋದು, ಗೊಬ್ಬರ ಮಾಡೋದು, ಹಲಸಿನ ಹಣ್ಣಿನ ವ್ಯಾಪಾರ, ಮಾವಿನ ಹಣ್ಣನ್ನು ಎಲ್ಲರ ಮನೆಗೆ ಉಚಿತವಾಗಿ ಕೊಡೋದು, ಹೀಗೆ ಇವುಗಳು ಅವನು ಮಾಡುವ ಕೆಲವು ಕೆಲಸಗಳ ವಿವರ. ವಿವರ ನೀಡದೆ ಇದ್ದರೂ ಆತನ ಇನ್ನೊಂದು ಕೆಲಸ ಈಗಾಗಲೇ ನಿಮಗೆ ತಿಳಿದಿರಬಹುದು. ಅದೇನೆಂದರೆ ಬೀಡಿ ಎಳೆಯೋದು. ಆತನ ಬಾಯಲ್ಲಿ ಯಾವಾಗಲು ಬೀಡಿಯೊಂದು ಹೊಗೆಯಾಡುತ್ತಲೇ ಇರಬೇಕು. ಆತನ ಬಾಯಲ್ಲಿ ಬೀಡಿ ಇಲ್ಲದೆ ಇದ್ದರೆ ಅವರು ನಜೀರ್ ಸಾಬರೆಂದು ಕೆಲವರಿಗೆ ಗುರುತೇ ಸಿಕ್ಕುವುದಿಲ್ಲ. ಇದನ್ನು ನಿಮಗೆ ಯಾಕೆ ಹೇಳುತ್ತಿದ್ದೀನಿ ಅಂದ್ರೆ ನಜೀರ್ ಸಾಬರನ್ನು ಅಜ್ಞಾತ ಸ್ಥಳದಲ್ಲಿ ಹುಡುಕುವ ಉಪಾಯವೂ ಇದೇ ಆಗಿದೆ. "ಹೊಗೆ ಇದ್ದಲ್ಲಿ ಬೆಂಕಿ ಇದ್ದೆ ಇರುತ್ತದೆ" ಎಂಬ ಗಾದೆಯನ್ನು ನಮ್ಮ ಊರಿನ ಮಟ್ಟಿಗೆ "ಹೊಗೆ  ಇದ್ದಲ್ಲಿ ನಜೀರ್ ಸಾಬರು ಇದ್ದೆ ಇರುತ್ತಾರೆ" ಎಂದು ಬದಲಿಸಿ ಕೊಳ್ಳಬಹುದು.
                     ನಜೀರ್ ಸಾಬರನ್ನು  ಅವರ ಬ್ಯುಸಿ ಕೆಲಸಗಳ ನಡುವೆ ಕೆಲವರು ಬೇಟೆಗೆ ಕರೆದೊಯ್ಯುವುದೂ ಇತ್ತು. ಅದಕ್ಕೆ ಕಾರಣ ಅವರ ಅಪಾರವಾದ ಅನುಭವ ಹಾಗೂ ಕಾಡಿನ ಪರಿಚಯ. ಮೀನು ಹಿಡಿಯಲು ಒಬ್ಬರೇ ಹೋಗುತ್ತಿದ್ದ ನಜೀರ್ ಸಾಬರನ್ನು ಕೆಲವರು ತಮಾಷೆ ಮಾಡುತ್ತಿದ್ದಿದ್ದೂ ಉಂಟೂ "ಸಾಬರೇ ಮೀನುಗಳಿಗೆ ನಸೀಮ ಬೀಡಿ ವಾಸನೆ ಗೊತ್ತಾಗುತ್ತೆ, ಬೀಡಿ ಬಿಸಾಕಿ ಗಾಳ ಹಾಕಿ" ಅಂತ. ಹೀಗಿರುವಾಗ ಊರ ಗೌಡರ ಮಗ ಹಾಗೂ ಇನ್ನಿಬ್ಬರು ಕ್ರಾಂತಿಕಾರಿ ಯುವಕರು ಸಾಹಸವೊಂದಕ್ಕೆ ಕೈ ಹಾಕಲು ನಿರ್ಧರಿಸಿದ್ದರು, ಊರ ಹತ್ತಿರದ ಕಾಡಿನಲ್ಲಿ ಕಾಡು ಹಂದಿ ಒಂದು ಸುಳಿದಾಡುತ್ತಿದೆ ಎಂಬ ಖಚಿತ ವರ್ತಮಾನವನ್ನು ಆಧರಿಸಿ, ಅದನ್ನು ಬೇಟೆಯಾಡಿಯೇ  ಬಿಡಬೇಕು ಎಂದಿದ್ದರು. ಆದರೆ ಸಾಬರು ದನಗಳ ಜಾತ್ರೆಯಿಂದ ಎರಡು ದನಗಳನ್ನು ತರಲು ಕೊಪ್ಪಕ್ಕೆ ಹೋಗಿದ್ದರಿಂದ ಎರಡು ದಿನ ಕಾಯಲೇ ಬೇಕಾಯ್ತು. "ನಜೀರ್ ಸಾಬರಿಲ್ಲದೆ ಬೇಟೆಗೆ ಹೋದರೆ ಹಂದಿ ಸಿಕ್ಕಬಹುದು, ಆದರೆ ಮನೆಗೆ ವಾಪಸ್ ಬರೋ ದಾರಿ ಸಿಕ್ಕಲ್ಲ!" ಅಂತ ಆ ಉತ್ಸಾಹಿ ಯುವಕರು ಮಾತನಾಡಿಕೊಂಡಿದ್ದರು. ಅವರ ಉತ್ಸಾಹ ತಣ್ಣಗಾಗುವ ಮೊದಲೇ ನಜೀರ್ ಸಾಬರು, ಕಾಲು ಲೀಟರ್ ಹಾಲು ಕೊಡುವ ಮುದಿ ದನದೊಂದಿಗೆ ಊರಿಗೆ ವಾಪಸ್ ಬಂದಿದ್ದರಿಂದ, ಮತ್ತೆ ಬೇಟೆಗೆ ಹೊರಡುವ ಸಂಚು ರೂಪಿಸಿ ನಜೀರ್ ಸಾಬರನ್ನು ಹೊರಡಿಸಿಕೊಂಡು ಕಾಡಿನ ಕಡೆ ನುಗ್ಗೇಬಿಟ್ಟರು.
                          ಮದ್ಯಾನ್ಹದವರೆಗೆ ಕಾಡೆಲ್ಲ ಅಲೆದರೂ ಯಾವ ಪ್ರಾಣಿಯೂ ಕಾಣದೆ ಎಲ್ಲರೂ ನಿರಾಶರಾಗಿದ್ದರು. ನಜೀರ್ ಸಾಬರಿಗೆ ಹಂದಿ ಬಿಟ್ಟು ಬೇರೆ ಯಾವುದಾದರೂ ಪ್ರಾಣಿ ಸಿಕ್ಕರೆ ಪಾಲು ಕೇಳಬಹುದು ಅನ್ನಿಸುತ್ತಿತ್ತು. ಮನೆಯಿಂದ ಕಟ್ಟಿ ತಂದಿದ್ದ ಬುತ್ತಿ  ತಿಂದು, ಅರ್ಧ ಗಂಟೆಯ ವಿಶ್ರಾಂತಿಯ ಬಳಿಕ ಮತ್ತೆ ತಮ್ಮ ತಮ್ಮ ಆಯುಧಗಳನ್ನು ಎತ್ತಿಕೊಂಡು ಬೇಟೆಗಾರರು ಹಂದಿಯ ಹುಡುಕಾಟಕ್ಕೆ ತೊಡಗಿದರು. ಬೀಡಿ ಎಳೆಯುತ್ತ ಸಾಬರು ಹೊಸ ಹುಮ್ಮಸ್ಸಿನಿಂದ ಹುಡುಕಲು ಆರಂಬಿಸಿದರು.
                           ಸಂಜೆ ವೇಳೆಗೆ ಯಾವ ಪ್ರಾಣಿ ಸಹ ಸಿಕ್ಕದೆ ಬೇಜಾರಿನಲ್ಲಿದ್ದ ಯುವಕರು, ಹಂದಿಯಿದೆ ಎಂದು ಹೇಳಿದವನನ್ನು ಶಪಿಸುತ್ತಿದ್ದಾಗ ದೂರದ ಪೊದೆಯಬಳಿ ಸದ್ದಾದ ಹಾಗನ್ನಿಸಿತು. ಹತ್ತಿರ ಹೋದ ಯುವಕರಿಗೆ ಅಲ್ಲಿ ಯಾವುದೋ ಪ್ರಾಣಿಯಿದೆ ಎಂದು ಖಚಿತವಾಯಿತು. ಕತ್ತಲಾಗಿದ್ದರೂ ಸ್ವಲ್ಪ ದೂರದಿಂದ ಅಂದಾಜಿನ ಮೇಲೆ ಗುಂಡು ಹಾರಿಸಬಹುದೆಂದು ಹತ್ತಿರ ಹೋಗದೆ ಅಲ್ಲಿಂದಲೇ ಗುಂಡು ಹಾರಿಸಲು ನಿರ್ಧರಿಸಿದರು. ಎಲ್ಲ ಯುವಕರಲ್ಲಿ ಶಬ್ದವೇದಿ ವಿದ್ಯೆ ಕಲಿತ ಏಕಲವ್ಯ ಮೈ ಮೇಲೆ ಬಂದಂತೆ ಅನ್ನಿಸಿತಾದರೂ ಒಬ್ಬರೇ ಗುಂಡು ಹೊಡೆಯುವುದು ಎಂದು ಕೈ ಸನ್ನೆ ಬಾಯಿ ಸನ್ನೆಯಿಂದ ನಿಶ್ಚಯಿಸಿದರು. ಒಬ್ಬ ಕಷ್ಟಪಟ್ಟು ಶಬ್ದ ಬಂದ ಕಡೆಗೆ ಗುರಿಯಿಟ್ಟು ಗುಂಡು ಹಾರಿಸಿಯೇ ಬಿಟ್ಟ, ಕೂಡಲೇ "ಅಯ್ಯೋ" ಎಂಬ ಸದ್ದು ಕೇಳಿತು. ಮನುಷ್ಯನನ್ನು ಬಿಟ್ಟು ಯಾವ ಪ್ರಾಣಿಯೂ ಅಯ್ಯೋ ಎನ್ನುವುದಿಲ್ಲವಲ್ಲ ಎಂದು ಯುವಕರು ಕೂಗು ಬಂದ ಕಡೆಗೆ ಓಡಿದರು, ಅಲ್ಲಿ ರಕ್ತಕಾರಿಕೊಂಡ ಕಾಲಿನೊಡನೆ ನಜೀರ್ ಸಾಬರು ಕೂಗುತ್ತ ಬಿದ್ದಿದ್ದರು. ಇವರ ಗುರಿ ತಕ್ಕ ಮಟ್ಟಿಗೆ ಮಾತ್ರ ಇದ್ದ ಕಾರಣ ನಜೀರ್ ಸಾಬರ ಪ್ರಾಣ ಉಳಿಯಿತು ಆದರೆ ಶಾಶ್ವತವಾಗಿ ಕುಂಟಿಕೊಂಡೇ ನಡೆಯಬೇಕಾಗಿ ಬಂತು.
                            ಯಾವುದೇ ಬೇಟೆ ಸಿಕ್ಕದೆ ಬೇಜಾರಾಗಿ ನಜೀರ್ ಸಾಬರು, ಸ್ವಲ್ಪ ಬದಿಗೆ ಹೋಗಿ ಗಿಡಗಳಿಗೆ ನೀರು ಹಾಯಿಸಿ ಬರೋಣವೆಂದು ಕೂತಿದ್ದರಷ್ಟೇ, ಬೀಡಿ ಖಾಲಿಯಾದ ಕಾರಣ ಬೇಗ ಊರು ಮುಟ್ಟಬೇಕೆಂದು ಅಂದುಕೊಳ್ಳುತ್ತಿದ್ದರು, ಆಗಲೇ ಡಮ್ ಎಂಬ ಸದ್ದಿನೊಂದಿಗೆ ತೂರಿಬಂದ ಗುಂಡು ಇವರ ಕಾಲಿಗೆ ಬಡಿಯಿತು. ಎಲ್ಲರಿಗಿಂತ ಹಿಂದೆ ನಡೆಯುತ್ತಿದ್ದ ಇವರು, ಉಳಿದ ಜನ ಯುವಕರು ಬಹಳ ಮುಂದೆ ಹೋಗಿಬಿಟ್ಟಿದ್ದು ಗಮನಿಸಲಿಲ್ಲ ಹಾಗೂ ಇವರನ್ನೇ ಪ್ರಾಣಿಯೆಂದು ಎಣಿಸಿ ಗುಂಡು ಹಾರಿಸುತ್ತಾರೆ ಎಂದು ಖಂಡಿತ ತಿಳಿದುಕೊಂಡಿರಲಿಲ್ಲ.
                             ಬಹುಷಃ ಬೀಡಿ ಎಳೆಯುತ್ತ ಕೂತಿದ್ದರೆ ಹೊಗೆ ನೋಡಿದ ಯುವಕರು ಅದು ನಮ್ಮ ನಜೀರ್ ಸಾಬರೇ ಇರಬಹುದು ಎಂದುಕೊಳ್ಳುತ್ತಿದ್ದರೋ ಏನೋ.ನಜೀರ್ ಸಾಬರಿಗೆ ಗುಂಡು ಬೀಳುತ್ತಿರಲಿಲ್ಲವೇನೋ ?


ಮುಂದಿನ ಕತೆ ನಾಳೆ ನನ್ಗೆ ಪುರುಸೊತ್ತಾದರೆ.

Comments

Popular posts from this blog

ಕುರುಡು ಮಂತ್ರ -ಪದ್ಮನಾಭ ಆಗುಂಬೆ ಅವರ ಕಾದಂಬರಿ ಬಗ್ಗೆ ನನ್ನ ಲೇಖನ.

ಸ್ಪೆಷಾಲಿಟಿ