ಲಲಿತ ಪ್ರಬಂಧ ಚಿಲ್ಲರೆ ಸಮಸ್ಯೆ
ಲಲಿತ ಪ್ರಬಂಧ
ಚಿಲ್ಲರೆ ಸಮಸ್ಯೆ
ಚಿಲ್ಲರೆ ಕೊಡದೆ ವ್ಯಾಪಾರಕ್ಕೆ ಬರುವವರನ್ನು ಇಂದು ಚಿಲ್ಲರೆ ಜನರಂತೆ ಕಾಣಲಾಗುತ್ತಿದೆ. ಹಿಂದೆ ಹತ್ತು ರೂಪಾಯಿ ಬಸ್ ಚಾರ್ಜನ್ನು ಎಂಟಾಣೆ, ಒಂದು ರೂಪಾಯಿ, ಎರಡು ರೂಪಾಯಿ ನಾಣ್ಯಗಳಲ್ಲಿ ಕೊಟ್ಟರೆ, ಕಂಡಕ್ಟರ್ ಇವನ್ಯಾವನೋ ಚಿಲ್ಲರೆ ಗಿರಾಕಿ ಎಂಬಂತೆ ನಖಶಿಖಾಂತ ನೋಡುವ ಕಾಲವಿತ್ತು. ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿ ಜೇಬಿನಲ್ಲಿ ಝಣಝಣಿಸುವ ನಾಣ್ಯಗಳಿದ್ದವನೇ ಹೋದಲ್ಲೆಲ್ಲಾ ಸರ್ವಮಾನ್ಯನಾಗಿದ್ದಾನೆ. ಆತನನ್ನು ವ್ಯಾಪಾರಿಗಳು ಮಂದಹಾಸದಿಂದ ಸ್ವಾಗತಿಸಿ, ಪ್ಲಾಸ್ಟಿಕ್ ಕೈ ಚೀಲಕ್ಕೂ ದುಡ್ಡು ಕೇಳದೆ ಗೌರವದಿಂದ ಕಳುಹಿಸುತ್ತಾರೆ. ಚಿಲ್ಲರೆ ಹೊಂದಿರುವ ಮನುಷ್ಯರ ಮರ‍್ಯಾದೆಯಲ್ಲಿ ಪದೋನ್ನತಿಯಾಗುವಂತೆ ಮಾಡಿದ ಸಂಪೂರ್ಣ ಶ್ರೇಯ ಎಟಿಎಂ ಗಳಿಗೇ ಸಲ್ಲಬೇಕು.
ಎಟಿಎಂ ಗಳು ಕಕ್ಕುವ ಐನೂರರ ನೋಟುಗಳನ್ನು ಸಣ್ಣಪುಟ್ಟ ಖರ್ಚಿಗಾಗಿ ಚಿಲ್ಲರೆಯನ್ನಾಗಿ ಬದಲಿಸುವುದೇ ಒಂದು ಪ್ರಯಾಸದ ಕೆಲಸ. ಈ ಯಂತ್ರಗಳ ಮೂಲಕ ಚಿಲ್ಲರೆ ನಾಣ್ಯಗಳೂ ಹೊರಬರುವಂತಿದ್ದರೆ ಬಹಳ ಅನುಕೂಲವಿರುತ್ತಿತ್ತು. ಆದರೆ ಎಲ್ಲಾ ಅರ್ಥಶಾಸ್ತ್ರಜ್ಞರ, ಬ್ಯಾಂಕುಗಳ ಕೇಂದ್ರ ಬಿಂದು ಶ್ರೀಮಂತರೇ ಆಗಿರುವಾಗ ಚಿಲ್ಲರೆ ಸಮಸ್ಯೆಯ ಬಗ್ಗೆ ಅವ್ಯಾಕೆ ಚಿಂತಿಸಿಯಾವು? ಶ್ರೀಮಂತರು ಸಾಮಾನ್ಯವಾಗಿ `ಕೀಪ್ ದಿ ಚೇಂಜ್' ಎಂದೇ ಹೇಳುವುದರಿಂದ ಅವರಿಗೆ ಚಿಲ್ಲರೆಯ ಅಗತ್ಯವಿರುವುದಿಲ್ಲ ಎಂಬುದೇ ಬ್ಯಾಂಕುಗಳ ನಂಬಿಕೆ.
ಹಾಲಿನ ಡೈರಿಯೊಂದರಲ್ಲಿ "ಚಿಲ್ಲರೆ ಇಲ್ಲದಿದ್ದರೆ ಹಾಲನ್ನು ಕೊಳ್ಳಲೇಬೇಡಿ",”ಎಂಬ ಬೋರ್ಡನ್ನು ಓದಿದಾಗ ಚಿಲ್ಲರೆಯ ಬೆಲೆ ಎಷ್ಟೆಂದು ನನಗೆ ತಿಳಿಯಿತು. ಚಿಲ್ಲರೆ ಕೊಡದಿದ್ದರೆ ನೀನು ನನ್ನಲ್ಲಿ ಹಾಲು ಕೊಳ್ಳದಿದ್ದರೂ ಪರವಾಗಿಲ್ಲವೆನ್ನಬೇಕಾದರೆ ಆ ವ್ಯಾಪಾರಿಗೆ ಚಿಲ್ಲರೆ, ಸಾಮಾನ್ಯ `ಚಿಲ್ಲರೆ ' ವಿಷಯವಾಗಿ ಮಾತ್ರ ಕಾಡಿರಲಿಕ್ಕಿಲ್ಲ. ಕೆಲವರು ಇದ್ದರೂ ಚಿಲ್ಲರೆ ಕೊಡದೆ ನಾಣ್ಯಗಳನ್ನು ಡಬ್ಬಗಳಲ್ಲಿ ಶೇಖರಿಸುತ್ತಾರೆಂದೂ, ಬೇಕಂತಲೇ ನಮ್ಮನ್ನು ಶೋಷಿಸುತ್ತಾರೆಂದೂ ನನಗೆ ಆ ವ್ಯಾಪಾರಿ ತಿಳಿಸಿದ್ದರು.
ಇನ್ನು ಕೆಲವರು ಮೆಡಿಕಲ್ ಸ್ಟೋರ್ ಗಳಲ್ಲಿ, ಅಂಗಡಿಗಳಲ್ಲಿ, ಟೋಲ್ ಗೇಟ್ ಗಳಲ್ಲಿ ಚಿಲ್ಲರೆಯ ಬದಲಾಗಿ ಚಾಕಲೇಟು ಕೊಡುವ ಪರಂಪರೆ ಪ್ರಾರಂಬಿಸಿದ್ದಾರೆ….ಇದರಲ್ಲಿ ಎರಡು ಲಾಭವಿದೆ. ಒಂದು ಚಿಲ್ಲರೆ ಸಮಸ್ಯೆ ಬಗೆಹರಿಯುತ್ತದೆ, ಇನ್ನೊಂದು ಚಾಕಲೇಟ್ ಬಹಳವಾಗಿ ಖರ್ಚಾಗುತ್ತದೆ. ಚಾಕಲೇಟ್‌ಗಳನ್ನು ಮಾರುವವರಿಗೆ ಮಾತ್ರ ಚಿಲ್ಲರೆ ಸಮಸ್ಯೆಯಿಂದ ಲಾಭವಾಗಿದೆಯೆನ್ನಬಹುದು. ಇವರು ಕೊಡುವ ಚಾಕಲೇಟುಗಳನ್ನು ನಾವು ಇಟ್ಟುಕೊಂಡು, ಇವರಿಗೇ ಚಿಲ್ಲರೆ ಬದಲಾಗಿ ಕೊಡಬಹುದೇ? ಕೊಟ್ಟರೆ ಇವರು ಅದನ್ನು ನಾಣ್ಯದ ಬದಲಾಗಿ ಕರೆನ್ಸಿಯಂತೆ ಪರಿಗಣಿಸುತ್ತಾರೆಯೇ? ಹೀಗೊಂದು ಪ್ರಯತ್ನ ಮಾಡಿದಾಗ ನನಗೆ ಸಿಕ್ಕಿದ್ದು ಅಂಗಡಿ ಮಾಲೀಕನ ಕೋಪೋದ್ರಿಕ್ತ ಮುಖ ಹಾಗೂ ಎರಡು ರೂಪಾಯಿ ನಾಣ್ಯ ಕೆಂಡದಂತೆ ಕಾದಿರುವಾಗ ಇದ್ದಿರಬಹುದಾದಂತ ಅವನೆರಡು ಕಣ್ಣುಗಳು. ನಾನು ಈ ಅಂಗಡಿ ಮಾಲೀಕ ಎರಡು ರೂಪಾಯಿಯ ಬದಲು ಚಾಕಲೇಟು ಇಸಕೊಂಡಿದ್ದರೆ, ಗಾಂಧೀ ಬಜಾರಿನ ಅಂಗಡಿಯಿಂದ ಹೋಲ್ ಸೇಲ್ ದರದಲ್ಲಿ ಚಾಕಲೇಟ್ ಡಬ್ಬ ಕೊಳ್ಳುವ ಯೋಚನೆ ಮಾಡಿದ್ದೆ, ಆದರೆ ಯೋಜನೆ ವಿಫಲವಾದದ್ದರಿಂದ ಯೋಚನೆ ಬಿಟ್ಟೆ.
ಹಾಗಾದರೆ ಚಿಲ್ಲರೆ ನಾಣ್ಯಗಳೆಲ್ಲ ಎಲ್ಲಿ ಹೋಗುತ್ತವೆ? ಜನರು ನಾಣ್ಯಗಳನ್ನು ತಮ್ಮ ಅತ್ಯಮೂಲ್ಯ ಕಾ ರ‍್ಯಗಳಿಗಾಗಿ ಮೀಸಲಿಡುತ್ತಾರೆ, ಆದ್ದರಿಂದ ಅವುಗಳನ್ನು ಡಬ್ಬಗಳಲ್ಲಿ, ಪಿಗ್ಗಿ ಬ್ಯಾಂಕಿನಲ್ಲಿ ಶೇಖರಿಸಿಡುತ್ತಾರೆ ಹಾಗೂ ಯಾವುದೇ ಕಾರಣಕ್ಕೂ ದಿನನಿತ್ಯದ ಖರ್ಚುಗಳಿಗೆ ಅದನ್ನು ಬಳಸುವುದಿಲ್ಲ,ಬಯಸುವುದಿಲ್ಲ. ಎನ್.ಆರ್.ಪುರ ಬಸ್ ಸ್ಟಾಂಡ್ ನಲ್ಲಿ ಕುರುಡನೊಬ್ಬ ಬಸ್ಸಲ್ಲಿ ಹಾಡುತ್ತಿದ್ದಾಗ ಅನೇಕ ಕರುಣಾಜೀವಿಗಳು ಅವನಿಗೆ ಭಿಕ್ಷೆ ಹಾಕಲು ಬಯಸಿದರೂ ಚಿಲ್ಲರೆಯಿಲ್ಲದೇ ಮ್ಲಾನವದನರಾಗಿ ಕುಳಿತಿದ್ದರು. ಡ್ರೈವರ್ ಸೀಟಿನ ಪಕ್ಕ ಕುಳಿತಿದ್ದ ಠೊಣಪನೊಬ್ಬ ಇಡೀ ಬಸ್ಸಿನ ಜನರಿಗೆ ಕೇಳಿಸುವಂತೆ ನಾಣ್ಯಗಳೆರಡನ್ನು ಬಸ್ಸಿನ ಕಬ್ಬಿಣದ ರಾಡಿಗೆ ಠೇಂಕರಿಸುವಂತೆ ಹೊಡೆದು ಭಿಕ್ಷುಕನಿಗೆ ನೀಡಿದ. ಆತ ನೀಡಿದ ಠೀವಿ ಹಾಗೂ ನಾಣ್ಯವನ್ನು ಸದ್ದು ಮಾಡಿದ ಬಗೆ ಏನು ಹೇಳುತ್ತಿತ್ತೆಂದರೆ "ನಿಮಗ್ಯಾರಿಗೂ ದಾನಮಾಡಿ ಪುಣ್ಯಗಳಿಸುವ ಯೋಗವಿಲ್ಲ, ಚಿಲ್ಲರೆ ಮನುಷ್ಯರುಗಳಿರಾ!" ಎಂಬಂತಿತ್ತು .
ಚಿಲ್ಲರೆಯೆಲ್ಲಾ ದೇವಸ್ಥಾನದ ಹುಂಡಿ ಡಬ್ಬ ಹಾಗೂ ಕಾಯಿನ್ ಬಾಕ್ಸ್ ಫೋನ್ ಗಳನ್ನು ಸೇರುತ್ತಿದೆ ಎಂಬುದು ನನ್ನ ಸ್ನೇಹಿತನೊಬ್ಬನ ವಾದ. ಹುಂಡಿ ಡಬ್ಬದಲ್ಲಿದ್ದರೂ ನಾಣ್ಯಗಳು ಚಲಾವಣೆಗೆ ಎಂದಾದರೊಮ್ಮೆ ಬರಲೇಬೇಕಲ್ಲವೇ? ಕಾಯಿನ್‌ಬಾಕ್ಸ್ ಫೋನ್‌ಗಳಲ್ಲಿ ಹಳೇ ವಾಷರ್‌ಗಳು ಬೀಳುತ್ತಿದೆ ಎಂದು ನನ್ನ ಇನ್ನೊಬ್ಬ ಸ್ನೇಹಿತ ಹೇಳುತ್ತಿರುವಾಗ ನಾಣ್ಯಗಳು ಕಣ್ಮರೆಯಾಗುತ್ತಿರುವ ಬಗ್ಗೆ ಸಂಶಯ ಏಳದಿರುತ್ತದೆಯೇ? (ಹಳೇ ಕತೆ - ಈಗ ಕಾಯಿನ್ ಬಾಕ್ಸ್ ಫೋನ್ ಗಳು ಬಳಕೆಯಲ್ಲೇ ಇಲ್ಲ ಬಿಡಿ )
ಚಿಲ್ಲರೆ ಸಮಸ್ಯೆ ಪರಿಹಾರಕ್ಕೆ ಬೆಲೆಯಿಳಿಕೆಯೇ ಮೊದಲ ಉಪಾಯ. ಎಲ್ಲಾ ವಸ್ತುಗಳ ಬೆಲೆಯೂ ಅದರ ಹಿಂದಿನ ಹತ್ತರ ಗುಣಾಕಾರಕ್ಕೆ ಇಳಿದರೆ ತುಂಬಾ ಸಂತೋಷ. ಉದಾಹರಣೆಗೆ ಮೂವತ್ತಾರು ರೂಪಾಯಿ ಪ್ರತೀ ಲೀಟರ್ ಹಾಲಿನ ಬೆಲೆ ಮೂವತ್ತಾಗಬೇಕು, ಐವತ್ತೆರಡು ರೂಪಾಯಿ ಬೆಲೆಯ ವಸ್ತುವು ಐವತ್ತು ರೂಪಾಯಿಗೇ ಸಿಗುವಂತಾಗಬೇಕು. ಹೀಗೆ.,
ಸೂಕ್ತ ಚಿಲ್ಲರೆ ತಂದು ವ್ಯಾಪಾರ ಮಾಡುವ ಸಾಮಾನ್ಯ ಮನುಷ್ಯರಿಗೆ, ಸಾವಿರ ಹಾಗೂ ಐನೂರರ ಗರಿಗರಿ ನೋಟನ್ನು ತೋರಿಸಿ `ಚಿಲ್ಲರೆ ಇಲ್ಲ'ವೆಂದಾಗ `ಆಮೇಲೆ ಕೊಡುತ್ತೇನೆ' ಎಂದು ಪುಗಸಟ್ಟೆ ವ್ಯಾಪಾರ ಮಾಡುವ ಶ್ರೀಮಂತರಿಗಿಂತಾ ಹೆಚ್ಚಿನ ಮರ್ಯಾದೆ ಸಿಗುವಂತಾಗಬೇಕು. ನಮಗೆ ಆದ್ಯತೆಯ ಮೇರೆಗೆ ಸಾಮಾನು ಕಟ್ಟಿಕೊಡಬೇಕು. ಮಾಲುಗಳಲ್ಲಿ, ಸೂಪರ್ ಮಾರ್ಕೆಟ್ಟುಗಳಲ್ಲಿ ಚಿಲ್ಲರೆ ಹೊಂದಿರುವವರಿಗೆ ಸರದಿಯ ಸಾಲಿನಿಂದ ವಿನಾಯ್ತಿ ನೀಡಿ ಗೌರವಿಸಬೇಕು. ಮೆಡಿಕಲ್ಸಗಳಲ್ಲಿ ಚಿಲ್ಲರೆ ಹೊಂದಿರುವವರಿಗೆ ಮೊದಲು ಔಷಧಿಗಳನ್ನು ನೀಡಿ ನಂತರ ಇನ್ನಿತರ ರೋಗಗಳನ್ನು ಹೊಂದಿದವರ ಕಡೆಗೆ ನೋಡಬೇಕು. ಚಿಲ್ಲರೆ ಹೊಂದಿಲ್ಲದಿರುವುದೂ ಒಂದು ರೀತಿಯ ನ್ಯೂನತೆಯೇ ಅಲ್ಲವೇ? ಈ ಕೊರತೆ ಅಥವಾ ನ್ಯೂನತೆಗೆ ಪರಿಹಾರ ನೀಡುವ ಡಾಕ್ಟರ್ ಎಂದರೆ- ಗುಡಿಯ ಅರ್ಚಕ, ಬ್ಯಾಂಕ್ ನೌಕರ, ಕಾಯಿನ್ ಫೋನ್ ಮಾಲೀಕ, ಭಿಕ್ಷುಕ ಹೀಗೆ ಯಾರೂ ಆಗಿರಬಹುದು. ಲಕ್ಮೀ ದೇವಿಯ ಕೈಯಿಂದ ನಾಣ್ಯಗಳು ಚಿಮ್ಮಿ ಹಾರುವುದನ್ನು ನೋಡಿರಬಹುದು, ಎಲ್ಲಾದರೂ ಐನೂರು,ಸಾವಿರದ ನೋಟು ಗಾಳಿಪಟದಂತೆ ಹಾರಿ ಬರುವುದನ್ನು ನೋಡಿದ್ದೀರಾ? ಹೀಗಾಗಿ ಚಿಲ್ಲರೆಗೇ ಬೆಲೆ ಜಾಸ್ತಿ, ದೇವರಿಗೂ ಚಿಲ್ಲರೆ ಮೇಲೇ ಪ್ರೀತಿ.
ಚಿಲ್ಲರೆಯಿಂದ ಅನುಕೂಲವಿದ್ದಂತೆ ಅನಾನುಕೂಲವೂ ಇದೆ. ವೃದ್ಧಾಪ್ಯ ವೇತನ ಸೌಲಭ್ಯವಿಲ್ಲದ ಮುದುಕಿ ಭಿಕ್ಷುಕಿ ದಿನಾ ಸಿಗುತ್ತಿದ್ದ ಭಿಕ್ಷೆ ಸುಮಾರು ಇಪ್ಪತ್ತರಿಂದ ಮೂವತ್ತು ರೂಪಾಯಿಗಳು. ತೇರಿನ ದಿನ (ರಥೋತ್ಸವ) ಅವಳಿಗೆ ಸುಮಾರು ನಾನೂರು ಚಿಲ್ಲರೆ ರೂಪಾಯಿಯಷ್ಟು ಭಿಕ್ಷೆ ಸಿಕ್ಕಿತಂತೆ. ಆನಂದತುಂದಿಲಳಾದ ಆಕೆ ರಾತ್ರಿ ಹತ್ತರಿಂದ ಎಣಿಸಲು ಪ್ರಾರಂಭಿಸಿ ಹತ್ತೂವರೆಗೆ ಮುಗಿಸಿದಳಂತೆ. ಹೆಚ್ಚಿನ ಆದಾಯದಿಂದ ಖುಷಿಯಾಗಿ ಎರಡು,ಮೂರು ಸಲ ಎಣಿಸಿ ಹನ್ನೆರಡರ ಹೊತ್ತಿಗೆ ಎಣಿಸಿ ಮುಗಿಸಿದಳಂತೆ. ಹತ್ತು ಘಂಟೆಗೆ ಸರಿಯಾಗಿ ಡ್ಯೂಟಿಗೆ ಹೊರಟ ಕಳ್ಳನಿಗೆ ಮುದುಕಿಯ ಗುಡಿಸಲಿನಿಂದ ನಾಣ್ಯದ ಸದ್ದು ಕೇಳಿದರೂ ಅದಕ್ಕೆ ತಲೆ ಕೆಡಿಸಿಕೊಳ್ಳದೇ ದೊಡ್ಡ ಬಂಗಲೆಗಳ ಕಡೆಗೆ ಹೊರಟನಂತೆ. ಕಳ್ಳತನ ಯಶಸ್ವಿಯಾಗಿ ಮುಗಿಸಿ ಹನ್ನೆರಡು ಘಂಟೆಯ ಸುಮಾರಿಗೆ ವಾಪಾಸ್ಸಾಗುವಾಗ ಮುದುಕಿಯ ಗುಡಿಸಲಿನಿಂದ ಇನ್ನೂ ನಾಣ್ಯದ ಸದ್ದು ಕೇಳಿಸುತ್ತಿದೆ!. ಮುದುಕಿಯನ್ನು ಮುಗಿಸಿ ನಿಧಿಯನ್ನು ಎಣಿಸುವಾಗ ಸಿಕ್ಕಿದ್ದು ನಾನೂರ ಇಪ್ಪತ್ತು ರೂಪಾಯಿಗಳು! ಹಾಗೂ ಆಗ ಸಮಯ ಹನ್ನೆರಡೂವರೆ.
ದೇಶದ ಅರ್ಥವ್ಯವಸ್ಥೆಯಲ್ಲಿ ಹಣದ ಸೋರಿಕೆಯಾಗುವಂತೆ ನನಗೂ ಒಮ್ಮೆ ಆಗಿತ್ತು. ಜೀನ್ಸ್ ಪ್ಯಾಂಟಿನ ಜೇಬಿನಲ್ಲಿ ತೂತಾಗಿ ನೋಟುಗಳೆಲ್ಲಾ ಉಳಿದು ನಾಣ್ಯಗಳು ಮಾತ್ರ ಸೋರಿಕೆಯಾಗಿತ್ತು. ಮೊದಲ ಬಾರಿಗೆ `ಚಿಲ್ಲರೆ ಇಲ್ಲ' ಎಂದು ಹೇಳುವಾಗ `ಹೋಂವರ್ಕ ತಂದಿಲ್ಲ' ಎನ್ನುವ ಶಾಲಾಬಾಲಕನ ಪರಿಸ್ಥಿತಿಯಾಗಿತ್ತು ಅಂಗಡಿಯಲ್ಲಿ.
ಚಿಲ್ಲರೆಯನ್ನು ಎಲ್ಲೂ ಬಳಸದೇ ಉಳಿಸಿದರೆ ನಿಮಗೆ ಆಗುವ ಲಾಭಗಳೇನು? ಖಾಲಿ ಬಿದ್ದಿರುವ ತೂಕ ತೋರಿಸುವ ಯಂತ್ರಗಳನ್ನು ಬಸ್ ನಿಲ್ದಾಣಗಳಲ್ಲಿ, ರೈಲ್ವೇ ನಿಲ್ದಾಣದಲ್ಲಿ ನೀವು ನೋಡಿರಬಹುದು, ಅದಕ್ಕೆ ನಾಣ್ಯ ತೂರಿಸಿ ನಿಮ್ಮ ತೂಕ ನೀವು ಪರೀಕ್ಷಿಸಿಕೊಳ್ಳಬಹುದು, ಹೀಗೆ ಮಾಡಿದಾಗ ಸುತ್ತಮುತ್ತಲಿನ ಜನರು ಅವರವರ ತೂಕ ಪರೀಕ್ಷೆ ಮಾಡಿಕೊಳ್ಳುವ ಉತ್ಕಟಾಪೇಕ್ಷೆ ಇದ್ದರೂ ಚಿಲ್ಲರೆಯಿಲ್ಲದೇ ಸಂಕಟಪಡುವುದನ್ನು ನೀವು ನೋಡಬಹುದು ಹಾಗೂ ಅವರ ಹೊಟ್ಟೆಕಿಚ್ಚಿಗೆ ನೀವು ಕಾರಣರಾಗಬಹುದು.
ಒಂದು ರೂಪಾಯಿಯ ಕಡ್ಲೇ ಮಿಠಾಯಿ,ಚಾಕಲೇಟು,ಪೆಪ್ಸಿ ಇವುಗಳನ್ನು ಮಾತ್ರ ಕೊಂಡುಕೊಳ್ಳಲು ನಿಮಗೆ ಮಾತ್ರ ಸಾಧ್ಯ.
ಅಶಕ್ತರಿಗೆ, ಇನ್ನಿತರ ಬಗೆಯ ಭಿಕ್ಷುಕರಿಗೆ ಬಸ್ಸಿನಲ್ಲಿ,ರೈಲಿನಲ್ಲಿ ಹಾಗೂ ರಸ್ತೆಗಳಲ್ಲಿ ಭಿಕ್ಷೆ ನೀಡಿ ಸಂತಸಪಡಬಹುದು.
ದೇವಸ್ಥಾನದಲ್ಲಿ ದೇವರಿಗೆ ಕೈ ಮುಗಿದು ಅಷ್ಟಐಶ್ವರ್ಯ ಕ್ಕಾಗಿ ಪ್ರಾರ್ಥನೆ ಮಾಡಬೇಕಾದಾಗ ಬೇಕಿರುವುದು ಇದೇ ಚಿಲ್ಲರೆ. ಪ್ರಾರ್ಥನೆಯ ನಂತರ ಚಿಲ್ಲರೆ ಹಣವನ್ನು ಹುಂಡಿಗೆ ಹಾಕಿದಾಗ `ಠಣ್'ಎಂಬ ಸದ್ದು ಬಂದರೆ ದೇವರಿಗೆ ನಿಮ್ಮ ಪ್ರಾರ್ಥನೆಯ ಮೆಸೇಜ್ ಡೆಲಿವರಿಯಾಯ್ತು ಎಂದರ್ಥ. ಆರತಿ ಸ್ವೀಕರಿಸುವಾಗ ಆರತಿ ತಟ್ಟೆಗೆ ನಾಣ್ಯ ಬಿದ್ದರೆ ಅರ್ಚಕರಿಗೂ ಸಂತಸ, ನೋಟುಗಳಾದರೋ ಸುಟ್ಟು ಹೋಗುವ ಸಂದರ್ಭವಿರುತ್ತದೆ.
ಹೋಮ ಹವನಗಳಲ್ಲಿ ಹೆಚ್ಚಿನ ಬೆಲೆಯ ನೋಟುಗಳು ನೂರು ಪ್ರತಿಶತ ಸುಟ್ಟಗಾಯಗಳಿಂದ ಬೂದಿಯಾಗುತ್ತದೆ. ನಿಮ್ಮ ನೀಡಿಕೆಯ ನಾಣ್ಯಗಳು ಮಾತ್ರ ಮತ್ತೆ ಚಲಾವಣೆಗೆ ಬಂದು ತಮ್ಮನ್ನು ಠಂಕಿಸುವಾಗ ಇದ್ದ ಉದ್ದೇಶವನ್ನು ಈಡೇರಿಸಲು ಆರ್‌ಬಿಐ ಯ ಕರ್ತವ್ಯಕ್ಕೆ ಮತ್ತೆ ಹಾಜರಾಗುತ್ತವೆ.
ಕ್ರಿಕೆಟ್ ಆಟ ಪ್ರಾರಂಭಿಸುವಾಗ ಟಾಸ್ ಹಾಕಲು ನಿಮ್ಮಲ್ಲಿರುವ ನಾಣ್ಯವೇ ಬೇಕು. ಆರ್‌ಬಿಐ ಯ ಗವನರ‍್ರೇ ಆದರೂ ಟಾಸ್ ಹಾಕಲು ನಾಣ್ಯಾನೇ ಬಳಸಬೇಕು.
ನದಿಗಳಿಗೆ ನಾಣ್ಯವೆಸೆದು ಬೇಡಿಕೊಳ್ಳುವ ಪ್ರತೀತಿ ಕೆಲವು ಕಡೆಯಿದೆ. ಅಲ್ಲೆಲ್ಲಾ ಎಸೆಯಲು ನಾಣ್ಯಗಳೇ ಬೇಕು.
ನಾಣ್ಯಗಳು ಜೇಬಿನಲ್ಲಿದ್ದರೇ ಮನುಷ್ಯನಿಗೆ ತೂಕ. ಸಾಕಷ್ಟು ಚಿಲ್ಲರೆ ನಾಣ್ಯಗಳಿಂದ ಬರುವ ತೂಕ ನೂರು,ಐನೂರರ ನೋಟಿನಿಂದ ಬರುತ್ತದೆಯೇ?
ಚಿಲ್ಲರೆ ನಾಣ್ಯಗಳು ಇನ್ನಿತರ ಹಲವಾರು ಉಪಾಯಗಳಿಗೆ ಉಪಯೋಗಿಸಲ್ಪಡುತ್ತದೆ. ಉದಾಹರಣೆಗೆ ರೈಲ್ವೆ ಕಂಬಿಯ ಮೇಲೆ ನಾಣ್ಯ ಇಟ್ಟು ಅದರ ಮೇಲೆ ರೈಲು ಹೋದರೆ ನಾಣ್ಯ ಅಯಸ್ಕಾಂತ ಆಗುತ್ತೆ ಅನ್ನುವ ನಂಬಿಕೆ. ಈ ನಂಬಿಕೆಯನ್ನು ಪರೀಕ್ಷಿಸಲು ಹೋದ ಜನರಿಂದ ಎಷ್ಟು ನಾಣ್ಯಗಳು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿವೆಯೋ ದೇವರೇ ಬಲ್ಲ.
ಮೊಬೈಲ್ ಕಂಪೆನಿಯೊAದು ಆಪಲ್ ಕಂಪೆನಿಗೆ ಕೊಡಬೇಕಾದ ದಂಡ ರೂಪದ ಹಣವನ್ನು ನಾಣ್ಯಗಳಲ್ಲಿ ನೀಡಿತಂತೆ, ಅದರ ಒಳಾರ್ಥ "ನನ್ಹತ್ರ ಇಲ್ಲಿರೋ ನಾಣ್ಯಗಳಷ್ಟು ಮಾಡೆಲ್ ಗಳಿವೆ ಆದರೆ ನಿನ್ಹತ್ರ ಇರೋದು ಆರೇ" ಎಂದಿರಬಹುದು.
ಚಿಲ್ಲರೆ ನಾಣ್ಯಗಳನ್ನು ಬಳಸದೇ ಕೂಡಿಡುವವರನ್ನು ದೂರದೃಷ್ಟಿ ಹೊಂದಿದವರು ಎನ್ನಬಹುದು, ಏಕೆಂದರೆ, ಇವರು ತಮ್ಮ ಮಕ್ಕಳು, ಮೊಮ್ಮಕ್ಕಳಿಗಾಗಿ ಅಮೂಲ್ಯವಾದ `ಸ್ವಯಾರ್ಜಿತ' ಆಸ್ತಿಯನ್ನು ಬಿಟ್ಟು ಹೋಗುವವರಿದ್ದಾರೆ. ಹಳೆಯ ಕಾಲದ ನಾಣ್ಯಗಳಿಗೆ ಈಗ ಭಾರೀ ಬೇಡಿಕೆ,ಬೆಲೆ ಇರುವಂತೆ; ಈ ವರ್ಷಗಳ ನಾಣ್ಯಗಳಿಗೆ ಮುಂದೆ ಇನ್ನೊಂದು ನೂರು ನೂರೈವತ್ತು ವರ್ಷಗಳಲ್ಲಿ ಭಾರೀ ಬೆಲೆ ಬರಬಹುದು. ಆಗ ನೀವು ಬಿಟ್ಟು ಹೋದ ಆಸ್ತಿಯನ್ನು ಅನುಭವಿಸಿ ನಿಮ್ಮನ್ನು ನಿಮ್ಮ ಮುಂದಿನ ಪೀಳಿಗೆಯ ಜನ ಖಂಡಿತ ಅಭಿನಂದಿಸುತ್ತದೆ.
ನೋಟುಗಳಿAದ ಭ್ರಷ್ಟಾಚಾರಗಳಾಗುತ್ತವೆ. ಲಂಚ,ವರದಕ್ಷಿಣೆ ಮುಂತಾದ ಅನಿಷ್ಟ ಸಂಪ್ರದಾಯಗಳಿಗೆ ನೋಟುಗಳು ಕಾರಣವಾಗುತ್ತಿದೆ. ಆದರೆ ಚಿಲ್ಲರೆ ನಾಣ್ಯಗಳು ಯಾವುದೇ ಅನ್ಯಾಯಗಳಿಗೆ ದಾರಿ ಮಾಡಿಕೊಡುವುದಿಲ್ಲ ಹಾಗೂ ಎಂದಿಗೂ ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ಲೋಪವೆಸಗುವುದಿಲ್ಲ. ನಾಣ್ಯಗಳು ಎಲ್ಲಾ ರೀತಿಯಿಂದಲೂ ಶ್ರೇಷ್ಟವಾಗಿರುವುದರಿಂದ ಅವುಗಳ ಬೆಲೆ ಹೆಚ್ಚಿಸಬೇಕು. ಉದಾಹರಣೆಗೆ ಹತ್ತು ರೂಪಾಯಿಯ ನೋಟು=ಹತ್ತು ರೂಪಾಯಿ ಬೆಲೆ ಆದರೆ ನಾಣ್ಯಗಳು ಸೇರಿ ಆದ ಹತ್ತು ರೂಪಾಯಿ=ಇಪ್ಪತ್ತು ರೂಪಾಯಿ ಬೆಲೆ. ಹೀಗೆ.,
ನಾಣ್ಯಗಳ ಬಗೆಗೆ ಮುಂದೆ ಕೆಲವು ಗಾದೆಗಳೂ ಪ್ರಚಲಿತಕ್ಕೆ ಬರಬಹುದು ಅವುಗಳೆಂದರೆ, "ನಾಣ್ಯ ಇದ್ದವನೇ ಗಣ್ಯ". "ಚಿಲ್ಲರೆ ಇದ್ರಷ್ಟೇ ವ್ಯಾಪಾರ,ಇಲ್ದಿದ್ರೆ ತಾತ್ಸಾರ". "ಚಿಲ್ಲರೆಗೆ ಹೋದ ಮಾನ ಸಾವಿರದ ನೋಟು ಕೊಟ್ರೂ ಬರಲ್ಲ"..,
ಈ ಲೇಖನ ಓದಿ ಚಿಲ್ಲರೆ ಹುಡುಕಿ ತೆಗೆದು, ದಿನನಿತ್ಯದ ಖರ್ಚಿಗಾಗಿ ಜೇಬಿನಲ್ಲಿಟ್ಟುಕೊಂಡು ಓಡಾಡಲು ಪ್ರಾರಂಭಿಸಿದರೆ ನಿಮ್ಮನ್ನು changed person ಎಂದು ನಾನು ತಿಳಿಯುತ್ತೇನೆ.
-ದೀಪಕ್ ಡೋಂಗ್ರೆ. ಶೃಂಗೇರಿ.
Comments
Post a Comment