ಲೇಖಕರಿಗೂ ಮುಳುವಾಗಲಿದೆಯೇ ಕೃತಕ ಬುದ್ದಿಮತ್ತೆ ಮತ್ತು ಸ್ವಯಂಬುದ್ದಿ?

 ಲೇಖಕರಿಗೂ ಮುಳುವಾಗಲಿದೆಯೇ ಕೃತಕ ಬುದ್ದಿಮತ್ತೆ ಮತ್ತು ಸ್ವಯಂಬುದ್ದಿ?

ಇತ್ತೀಚೆಗಿನ ಬೆಳವಣಿಗೆಗಳಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ತನ್ನ ಛಾಪನ್ನು ಮೂಡಿಸುತ್ತಿರುವುದು ಅಚ್ಚರಿಗೆ ಕಾರಣವಾದಂತೆ ಆತಂಕಕ್ಕೂ ಎಡೆಮಾಡಿಕೊಡುತ್ತಿದೆ. ಕೃತಕ ಬುದ್ದಿಮತ್ತೆಯು ಮುಂದುವರೆದು ತನ್ನಿಂದ ತಾನೇ ನಿರ್ಧಾರಗಳನ್ನು ತೆಗೆದುಕೊಳ್ಳುವ  ಕಾರ್ಯಕ್ಷಮತೆ ಗಳಿಸುವ ಸಾಧ್ಯತೆಯಿರುವುದರಿಂದ ಅದನ್ನಿಲ್ಲಿ ‘ಸ್ವಯಂಬುದ್ಧಿ’ ಎಂದು ಟಂಕಿಸಿದ್ದೇನೆ, ಇದೇ ಪದವು ಮುಂದೆ ಹೆಸರುವಾಸಿಯಾಗಬಹುದು.
ಕೃತಕ ಬುದ್ಧಿಮತ್ತೆಯ ವ್ಯಾಖ್ಯಾನದ ವಿಷಯಕ್ಕೆ ಬರುವುದಾದರೆ ಜಾನ್ ಮೆಕಾರ್ಥಿ ಎನ್ನುವ ವಿಜ್ಞಾನಿ 1955 ರಲ್ಲಿಯೇ ಇದರ ಬಗ್ಗೆ ವಿವರಣೆ ನೀಡುತ್ತಾ  “ಯಂತ್ರಗಳು ಮನುಷ್ಯನಂತೆ ಆಲೋಚಿಸುವುದು” ಎಂದು ಭವಿಷ್ಯ ನುಡಿದಿದ್ದರು. (Humane Artificial Intelligence: The Fragility of Human Rights Facing AI: Maria Stefania Cataleta, Jan 01, 2020, JSTOR)
ಸ್ವಯಂಬುದ್ಧಿ ಬೇರೆ ಬೇರೆ ರಂಗಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಲಿದೆ. ಇದು ಮನುಷ್ಯನ ಸೃಜನಶೀಲತೆಗೆ ಹಾಗೂ ಕ್ರಿಯಾತ್ಮಕತೆಗೆ ಯಾವ ರೀತಿಯಲ್ಲಿ, ಎಷ್ಟರ ಮಟ್ಟಿಗೆ ಅಪಾಯಕಾರಿಯಾಗಲಿದೆ ಎಂಬುದು ಭವಿಷ್ಯದ ಗಂಡಾಂತರಗಳಲ್ಲಿ ಒಂದಾಗಿದೆ. ಕೃತಕ ಬುದ್ಧಿಮತ್ತೆಗೆ ಕೆಲಸ ನಿರ್ವಹಿಸಲು ಮನುಷ್ಯನ ವಿವೇಚನೆಯ ಅಗತ್ಯವಿರುತ್ತದೆ, ಆದರೆ ಮುಂದುವರೆದು ಇದು ತನ್ನ ನಿರ್ಧಾರಗಳನ್ನು ತಾನೇ ತೆಗೆದುಕೊಳ್ಳುವ ಮಟ್ಟಿಗೆ ಇದಕ್ಕೆ ಸ್ವಾತಂತ್ರ್ಯ ಸಿಕ್ಕರೆ ಇದೊಂದು ಫ್ರಾಂಕನ್ಸ್ಟೈನ್ ಆಗಬಹುದು.
ಚಾಟ್ ಜಿಪಿಟಿಯ ಜನಪ್ರಿಯತೆಯ ಮುಂದುವರಿದ ಭಾಗವಾಗಿ ಬೇರೆ ಬೇರೆ ಬಾಟ್‍ಗಳು ಬೇರೆ ಬೇರೆ ಕೆಲಸಗಳನ್ನು ಮಾಡಿಕೊಡುವುದರ ಬಗ್ಗೆ ನೀವು ತಿಳಿದಿದ್ದೀರಿ. ಬೇಕಾದ ಕತೆ, ಲೇಖನ, ಕವನಗಳಿಂದ ಹಿಡಿದು ಮಕ್ಕಳ ಮನೆಗೆಲಸ, ಹಾಸ್ಯ ಬರವಣಿಗೆಗಳು, ಜೋಕುಗಳು, ಸಂಭಾಷಣೆ, ಚಿತ್ರರಚನೆಯವರೆಗೆ ಎಲ್ಲವುಗಳನ್ನು ಕೃತಕ ಬುದ್ಧಿಮತ್ತೆಯು ರಚಿಸಿಕೊಡುತ್ತಿದೆ. ಮೀಮ್ ರಚನೆ ಮಾಡುತ್ತಿರುವ ಡಾಲ್-ಇ, ಕೃತಕ ಬುದ್ಧಿಮತ್ತೆ ರಚಿಸಿಕೊಡುತ್ತಿರುವ ಚಲನಚಿತ್ರದ ಸಂಭಾಷಣೆಗಳು, ಇವುಗಳು ಮನುಷ್ಯರ ಉದ್ಯೋಗಾವಕಾಶಗಳನ್ನು ಕಿತ್ತುಕೊಳ್ಳುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ.
ಟ್ರ್ಯಾಕ್ಟರ್ ಬಂದಾಗ ವ್ಯವಸಾಯದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಆಳುಗಳ ಕೆಲಸಕ್ಕೆ ಕುತ್ತು ಬಂದರೂ ಟ್ರ್ಯಾಕ್ಟರ್ ಓಡಿಸುವವನಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಕ್ಕಿತಲ್ಲವೇ? ಹಾಗೆಯೇ ಇದೇ ಉದಾಹರಣೆಯ ರೀತಿ ಏಐ ಉಪಕರಣಗಳನ್ನು ಬಳಸಿಕೊಳ್ಳುವ ಕೌಶಲ್ಯ ಬೆಳೆಸಿಕೊಳ್ಳುವವರು ಈ ಸಂದರ್ಭವನ್ನು ತಮ್ಮ ವೃತ್ತಿ ಪದೋನ್ನತಿಗಾಗಿ ಉಪಯೋಗಿಸಿಕೊಳ್ಳಬಹುದು.
ಕೃತಕ ಬುದ್ಧಿಮತ್ತೆಯು ‘ಪ್ರಜ್ಞೆ’ಯನ್ನು ಬೆಳೆಸಿಕೊಂಡು, ತಾನೇ ತಾನಾಗಿ ಯೋಚಿಸಿ ಮನುಷ್ಯನ ಹಸ್ತಕ್ಷೇಪವಿಲ್ಲದೆಯೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಕಾಲ ಬಂತೆಂದರೆ ‘ಟರ್ಮಿನೇಟರ್’ ಚಲನಚಿತ್ರದ ದೃಶ್ಯಗಳು ಕಣ್ಮುಂದೆ ಬಂದಂತೆಯೇ ಸರಿ. ಕೊಲಂಬಿಯಾ ವಿಶ್ವವಿದ್ಯಾಲಯವು ತಾನೇ ತಾನಾಗಿ ರಿಪೇರಿ ಮಾಡಿಕೊಳ್ಳಬಲ್ಲ ರೋಬೋಟ್ ‘ಬಾಹು’ವನ್ನು ಅಭಿವೃದ್ಧಿ ಪಡಿಸಿದ ಮೇಲೆ ಸ್ವಯಂಬುದ್ಧಿಯ ಹೊಸ ಆಯಾಮಗಳು ತೆರೆದುಕೊಳ್ಳುತ್ತಿದೆ.
ಕೃತಕ ಬುದ್ಧಿಮತ್ತೆ ಹೇಗೆ ಕೆಲಸ ಮಾಡುತ್ತದೆ ಎಂದರೆ, ಇದು ಅಂತರ್ಜಾಲದಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಅಗತ್ಯಕ್ಕೆ ತಕ್ಕಂತೆ ಬೇರೆ ಬೇರೆ ರೀತಿಯ ಕಂಟೆಂಟುಗಳನ್ನು ಸೃಜಿಸುತ್ತದೆ. ಮನುಷ್ಯರೇ ಬರೆದಿದ್ದಾರೆ ಎನ್ನುವಂತೆ ನಿಮಗೆ ಬೇಕಿರುವ ವಿಷಯಗಳಿಗೆ ಸಂಬಂಧಿಸಿದ ಲೇಖನಗಳು, ವರದಿಗಳು, ಹಾಡುಗಳನ್ನು, ಚಿತ್ರಗಳನ್ನು ಇವು ಸೃಷ್ಟಿಮಾಡಬಲ್ಲವು.
“ಹೋಶಿ ಶಿನಿಚಿ ಸಾಹಿತ್ಯ ಪ್ರಶಸ್ತಿ” ಎಂಬುದು ಜಪಾನ್ ದೇಶದ ಪ್ರತಿಷ್ಟಿತ ಸಾಹಿತ್ಯ ಪುರಸ್ಕಾರಗಳಲ್ಲಿ ಒಂದು. ಪ್ರತೀ ವರ್ಷದಂತೆ 2016ರಲ್ಲಿಯೂ ಕೂಡ ಕಾದಂಬರಿಗಳನ್ನು ಪ್ರಶಸ್ತಿಗಾಗಿ ಆಯ್ಕೆಮಾಡುವಾಗ ಅಚ್ಚರಿಯೊಂದು ಕಾದಿತ್ತು. ಮನುಷ್ಯ ಮಾತ್ರರು ಬರೆದಿರುವ ಕಾದಂಬರಿಗಳ ಜೊತೆಗೆ ಆ ಸಾಲಿನಲ್ಲಿ ಸ್ವಯಂಬುದ್ಧಿಯ ಕಾದಂಬರಿಯೂ ಸಹ ಪ್ರಶಸ್ತಿಗಾಗಿ ಗಣನೆಗೆ ತೆಗೆದುಕೊಳ್ಳಬೇಕಾಯಿತು. ನಮ್ಮ ನಿಮ್ಮೆಲ್ಲರ ಆತಂಕಕ್ಕೆ ಕಆರಣವಾಗುವಂತೆ ಮೊದಲ ಸುತ್ತಿನಲ್ಲಿ ಗೆದ್ದಿತ್ತು ಕೂಡ. ವಿಡಂಬನೆಯೆಂದರೆ ಈ ಕಾದಂಬರಿಯ ಹೆಸರು “The Day A Computer Writes A Novel.” ಎಂಬುದಾಗಿತ್ತಲ್ಲದೆ ಅದರ ಕತೆಯು “ಹೇಗೆ ಸ್ವಯಂಬುದ್ಧಿಯು ಕಾದಂಬರಿಯನ್ನು ಸೃಷ್ಟಿ ಮಾಡಿತು” ಎಂಬುದರ ಬಗ್ಗೆಯೇ ಇತ್ತು! ಆದರೆ ಅದೃಷ್ಟವಷಾತ್ ಅದು ಮುಂದಿನ ಸುತ್ತಿನಲ್ಲಿ ಗೆಲುವು ಸಾಧಿಸಲಿಲ್ಲ.
ಸ್ವಯಂಬುದ್ಧಿಯಿಂದಾಗುವ ಸಮಸ್ಯೆಗಳು:
ಕೃತಕ ಬುದ್ಧಿಮತ್ತೆಯು ಬೇರೆ ಬೇರೆ ಅಗತ್ಯಕ್ಕನುಗುಣವಾಗಿ ವರದಿಗಳನ್ನು, ಕಂಟೆಂಟುಗಳನ್ನು ತಯಾರಿಸಿಕೊಡುತ್ತಿದೆಯಷ್ಟೇ? ಅದಕ್ಕಾಗಿ ಅದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ತನ್ನ ಕಾರ್ಯ ಸಾಧಿಸುತ್ತದೆ. ಆದರೆ ಅದರ ನೈಜತೆ, ವಿಷಯ ಅಧಿಕೃತವೋ ಅಲ್ಲವೋ ಎಂಬುದರ ವಿಶ್ಲೇಷಣೆ ಮಾಡಲು ಅದಕ್ಕೆ ಸಾಧ್ಯವಾಗುವುದಿಲ್ಲ. ಅದು ಈಗಿನ ಜನರ ಇಷ್ಟಾನಿಷ್ಟಗಳೇನು ಎಂಬುದನ್ನು ಡಾಟಾ ಮೂಲಕ ತಿಳಿದುಕೊಳ್ಳಬಹುದು, ಯುವಜನರ ಟ್ರೆಂಡುಗಳ ಬಗ್ಗೆ, ಆಸೆ ಆಕಾಂಕ್ಷೆಗಳ ಬಗ್ಗೆ ತಿಳಿದುಕೊಳ್ಳಬಹುದಷ್ಟೇ.
ಸ್ವಯಂಬುದ್ಧಿಯು ಬೇರೆ ಬೇರೆ ವಿಷಯಗಳ ಬಗ್ಗೆ ಸುದ್ದಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಕೊಡುವುದಲ್ಲದೇ, ಹಲವರ ಕೆಲಸವನ್ನು ಕೆಲವರ ಸಹಾಯ ಪಡೆದುಕೊಂಡು ಬೇಕಾದ ರೀತಿಯಲ್ಲಿ ಮಾಡಿಕೊಡುತ್ತದೆ. ಇದು ಉದ್ಯೋಗದಲ್ಲಿ ಏರುಪೇರುಗಳಾಗುವ ಸಾಧ್ಯತೆಗೆ ಕಾರಣವಾಗುತ್ತದೆ. ಸ್ವಯಂಬುದ್ಧಿಯು ಉದ್ಯೋಗದ ಅನಿಶ್ಚಿತತೆ, ವಿಷಯದಲ್ಲಿನ ಪಕ್ಷಪಾತ ಮತ್ತು ವೈಯಕ್ತಿಕ ಮಾಹಿತಿಯ ಸೋರಿಕೆಗೆ ಕಾರಣವಾಗಬಲ್ಲದು. ಸ್ವಯಂಬುದ್ಧಿಯು ಕೃತಿಚೌರ್ಯ ಹಾಗೂ ಬೌದ್ಧಿಕ ಆಸ್ತಿಯ ಬಗ್ಗೆ ಯಾವುದೇ ಕಾಳಜಿ ಹೊಂದಿರದೇ ಕೇವಲ ವಿಷಯಗಳನ್ನು ಹೊಂದಿಸಿ ಬರೆಯುವ ಕೆಲಸ ನಿರ್ವಹಿಸುತ್ತದೆ. ಇದು ಲೇಖಕರಿಗೆ, ಕವಿಗಳಿಗೆ, ವಿಮರ್ಶಕರಿಗೆ, ಕತೆಗಾರರಿಗೆ ತಲೆನೋವಾಗಿ ಪರಿಣಮಿಸಿ ಹೆಸರು ಮತ್ತು ಆರ್ಥಿಕ ನಷ್ಟಗಳಿಗೆ ಕಾರಣವಾಗುತ್ತದೆ.
ಡಾ. ಮಾರ್ಕ ವ್ಯಾನ್ ಪ್ರಕಾರ ಮುಂದಿನ ದಿನಗಳಲ್ಲಿ ವರದಿಗಾರರಿಗೆ ಮೇಲ್ವಿಚಾರಣೆ ಮತ್ತು ಸಂಕಲನದ ಕೆಲಸಗಳು ಉಳಿಯುತ್ತವೆಯೇ ಹೊರತು ಉಳಿದಂತೆ ಸುದ್ದಿಗಳನ್ನು ಸ್ವಯಂಬುದ್ಧಿಯೇ ಹೆಣೆದು ಕೊಡುತ್ತದೆ ಎಂದು ಅಂದಾಜಿಸಿದ್ದಾರೆ. (markvanrijmenam.medium.com)
ಸ್ವಯಂಬುದ್ಧಿಯನ್ನು ನಿಯಂತ್ರಿಸುವ ಯಾವುದೇ ಮೂಗುದಾರವಿಲ್ಲದೇ ಅದು ಮನುಷ್ಯನನ್ನೇ ಮೀರಿಸುವ ಅಪಾಯವಿದೆ. ದಿನನಿತ್ಯದ ಕೆಲಸಗಳಲ್ಲಿ ಸಹಾಯ ಮಾಡಿದರೂ ಕೂಡ ಹಲವಾರು ಅತಂತ್ರ ಸ್ಥಿತಿಗೆ ಕೃತಕ ಬುದ್ಧಿಮತ್ತೆಯು ಕಾರಣವಾಗುತ್ತದೆ. ಇವುಗಳಲ್ಲಿ ಮಾಹಿತಿಯಲ್ಲಿನ ದೋಷ, ನೈಜತೆಯಿಂದ ಕೂಡಿರದೇ ಇರುವ ಸಂಭವವಿರುವ ವರದಿಗಳು ಇತ್ಯಾದಿ ಸಮಸ್ಯೆಗಳು ಒಳಗೊಂಡಿದೆ.
ಸ್ವಯಂಬುದ್ಧಿಯು ಹೇಗೆ ಹಲವು ಉದ್ಯೋಗಗಳನ್ನು ಕಸಿದುಕೊಳ್ಳುತ್ತದೆಯೋ ಹಾಗೆಯೇ ಹಲವಾರು ಹೊಸ ರೀತಿಯ ಅವಕಾಶಗಳಿಗೆ ದಾರಿ ಮಾಡಿಯೂ ಕೊಡುತ್ತದೆ. ಈ ಹೊಸ ರೀತಿಯ ಉದ್ಯೋಗಾವಕಾಶಗಳು ನೈಪುಣ್ಯತೆ ಹೊಂದಿರುವ ವೃತ್ತಿಪರರಿಗೆ ಅನುಕೂಲ ಮಾಡಿಕೊಡುತ್ತದೆ. ಅದೇ ರೀತಿ ಸ್ವಯಂಬುದ್ಧಿಯ ಮೇಲೆ ಈ ಕೂಡಲೇ ಸಂಪೂರ್ಣ ಅವಲಂಬನೆ ಆಗದಿರಲು ಈಗಿರುವ ಸ್ವಯಂಬುದ್ಧಿಯ ಅನಾನುಕೂಲಗಳೂ ಕಾರಣ. ಅವೇನೆಂದರೆ, ಸ್ವಯಂಬುದ್ಧಿಯು ಕತೆಯನ್ನು ಸೃಷ್ಟಿಸಬಹುದು ಆದರೆ ಸೃಜನಾತ್ಮಕತೆಯನ್ನಲ್ಲ. ವರದಿಯನ್ನು ಕಲೆ ಹಾಕಬಹುದು ಆದರೆ ನೈಜತೆಯನ್ನಲ್ಲ. ವಿಮರ್ಶೆಯನ್ನು ಒಗ್ಗೂಡಿಸಬಹುದು ಆದರೆ ಮನುಷ್ಯಸಹಜ ಭಾವನೆಗಳಿಗೆ ಸ್ಪಂದಿಸಲಾಗುವುದಿಲ್ಲ.
ಅಲ್ಗೋರಿಥಂಗಳ ಆಧಾರದ ಮೇಲೆ ಕಂಟೆಂಟು ಹೆಣೆಯುವ ಈ ಸ್ವಯಂಬುದ್ಧಿಯು ಪಕ್ಷಪಾತಿಯಾಗಿರಬಹುದು ಏಕೆಂದರೆ ಅದು ಅಂತರ್ಜಾಲದಲ್ಲಿರುವ ಮಾಹಿತಿಯ ಆಧಾರದಲ್ಲಿ ವರದಿಯನ್ನು ಸೃಜಿಸುತ್ತದೆಯೇ ಹೊರತು, ಸಂದರ್ಭವನ್ನೋ, ನೈಜತೆಯನ್ನೋ ಪರೀಕ್ಷಿಸಲು ಹೋಗುವುದಿಲ್ಲ, ಗಣನೆಗೂ ತೆಗೆದುಕೊಳ್ಳುವುದಿಲ್ಲ. ಮನುಷ್ಯನ ಬುದ್ಧಿಮತ್ತೆಗೂ ಕೃತಕ ಬುದ್ಧಿಮತ್ತೆಗೂ ಇರುವ ವ್ಯತ್ಯಾಸವೆಂದರೆ ಮನುಷ್ಯ ತನ್ನ ಕ್ರಿಯಾತ್ಮಕತೆಯಿಂದ ಸೃಜನಶೀಲ ಸೃಷ್ಟಿಗೆ ಕಾರಣವಾಗಬಲ್ಲ. ಅದರಲ್ಲಿ ತಪ್ಪು ಒಪ್ಪುಗಳು, ತಕರಾರುಗಳು ಸಹಜ ಹಾಗೂ ಸಾಮಾನ್ಯ ಆದರೆ ಕೃತಕ ಬುದ್ಧಿಮತ್ತೆಯ ರಚನೆಗಳು ಮನುಷ್ಯ ಸಹಜ ತಪ್ಪುಗಳನ್ನು ಮೀರಿದ್ದು ಯಾಂತ್ರಿಕವಾಗಿರಲಿದೆ.
ಸೃಜನಶೀಲತೆಗೆ ಸ್ವಯಂಬುದ್ಧಿಯು ಇನ್ನೂ ತೆರೆದುಕೊಳ್ಳದೇ ಇರುವುದು ಮನುಷ್ಯ ಸಂಕುಲಕ್ಕೆ ವರವೆಂದೇ ಹೇಳಬಹುದು. ಎಲ್ಲಿಯವರೆಗೆ ಕವಿಗಳು ಸ್ವಂತ ಕಲ್ಪನೆಯ ಸಾಗರದಲ್ಲಿ ಮಿಂದೆದ್ದು ಬಂದು ಕವನಗಳನ್ನು ಬರೆಯುವರೋ, ಲೇಖಕರು, ಕತೆಗಾರರು ನವನವೀನತೆಗೆ ಸ್ವಂತಿಕೆಗೆ ಒತ್ತುಕೊಡುವರೋ ಅಲ್ಲಿಯವರೆಗೆ ಸ್ವಯಂಬುದ್ಧಿ ಅಪಾಯ ತಂದೊಡ್ಡದಿರಬಹುದು. ಅಂತೆಯೇ ಮುಂದಿನ ದಿನಗಳಲ್ಲಿ ಅಂತರ್ಜಾಲದಲ್ಲಿ ತಮ್ಮ ಬರಹಗಳನ್ನು ಪ್ರಕಟಿಸುವ ಮುಂಚೆ ಅದರ ಹಕ್ಕಿನ ರಕ್ಷಣೆಯ ಬಗ್ಗೆ ಹಾಗೂ ಅದು ಕೃತಿ ಚೌರ್ಯವಾಗದಂತೆ ರಕ್ಷಣೆ ಮಾಡಿಕೊಳ್ಳುವ ಅನಿವಾರ್ಯತೆಯೂ, ಜವಾಬ್ದಾರಿಯೂ, ಆಯಾ ಬರಹಗಾರರಿಗೆ ಒದಗಿಬಂದಿದೆ.
ತಂತ್ರಜ್ಞಾನದಲ್ಲಿನ ಹೊಸ ಹೊಸ ಆವಿಷ್ಕಾರಗಳು, ಬದಲಾವಣೆಗಳು ಹೊಸ ರೀತಿಯ ಅಪಾಯಗಳನ್ನೂ ತೊಂದರೆ ತಾಪತ್ರಯಗಳನ್ನೂ ತಂದೇ ತರುತ್ತದೆ. ಕಳೆದ ಶತಮಾನದಿಂದೀಚೆ ಆವಿಷ್ಕಾರಗೊಂಡ ಎಲ್ಲಾ ಯಂತ್ರೋಪಕರಣಗಳೂ ಸಹ ಮನುಷ್ಯನ ಅಸ್ತಿತ್ವವನ್ನೇ ಪ್ರಶ್ನೆ ಮಾಡುವಂತಿತ್ತು, ಆದರೆ ಕಾಲಾನುಕ್ರಮದಲ್ಲಿ ಅದಕ್ಕೆ ಸೂಕ್ತ ಸಮಾಧಾನವೂ, ಪರ್ಯಾಯ ಮಾರ್ಗಸೂಚಿಗಳೂ ಮನುಷ್ಯ ಕಂಡುಕೊಂಡ ಪರಿಹಾರಗಳಿಂದ ಒದಗಿ ಬಂತು. ಅದೇ ರೀತಿ ಈ ಸ್ವಯಂಬುದ್ಧಿಯು ತಂದೊಡ್ಡುವ ಅಪಾಯಗಳನ್ನೂ ಕೂಡ ಮನುಷ್ಯ ಸಂಕುಲದ ಒಳಿತಿಗಾಗಿ ಹಲವಾರು ಅಗತ್ಯ ನಿಯಂತ್ರಣ ಮಾರ್ಗಗಳನ್ನು ಅನುಸರಿಸಿ, ಅತೀ ಅಗತ್ಯವಾಗಿ ಬೇಕಾದಲ್ಲಿ ಮಾತ್ರ ಅಪಾಯಕಾರಿಯಾಗಬಲ್ಲ ತಂತ್ರಜ್ಞಾನಗಳನ್ನು ಬಳಸುವ ಮೂಲಕ ಎಚ್ಚರಿಕೆ ವಹಿಸುವುದು ಸೂಕ್ತ.
- ಡಾ. ದೀಪಕ್ ಡೋಂಗ್ರೆ. ಜಿ


Comments

Popular posts from this blog

BASIC COMPUTER APPLICATIONS OLD SYLLABUS 15CP16P

15CP15P MODERN BUSINESS PRACTICES OLD SYLLABUS

COMPREHENSION PASSAGE FOR PRACTICE