ಕವನ “ಸಾಮಾಜಿಕ ಮಾಧ್ಯಮ”
ಕವನ “ಸಾಮಾಜಿಕ ಮಾಧ್ಯಮ”
ತೆರಳಿದ್ದೆ ನಾನೊಮ್ಮೆ ಪುಸ್ತಕಗಳ ಲೋಕಕ್ಕೆ,
ಹರಿಯದ ಹೊತ್ತಗೆಗಳ ಸಾಲು ಸಾಲು.
ತಿರುಗಿಸದ ಪುಟಗಳ, ಮಡಚದ ಹಾಳೆಗಳ
ನಡುವೆ ಕಂಡಿದ್ದು ಓದುಗ ಜನರ ಅಭಾವ.
ಕಳೆದ ಜನಾಂಗದ ಶಾಂತಿಯ ತೋಟದಲ್ಲಿ;
ಓದಿಗೆ ಕೊರತೆ.
ಅಲ್ಲಿ ಕಂಡೆ ಹೊಸಲೋಕದ
ಯುವ ಜನತೆಯ
ನನಗಂದರು
“ಕೊರತೆಯ ಬಗೆಗೆ ಚಿಂತೆಯೇತಕೆ,
ಓದಿ ತಿಳಿದವರು ದೃಶ್ಯ ಶ್ರಾವ್ಯ
ಕಡತ ಹಂಚುವರಲ್ಲ.”
ಜಂಗಮಮವಾಣಿಯ ತಿದ್ದಿ ತೀಡಿ, ಕುಟ್ಟುತ್ತಿದ್ದ
ಈ ನೂರು ಜನರ ಬಿಸಿ ರಕ್ತದ ಯುವಶಕ್ತಿ
ಇನ್ನೂರ ಎಂಭತ್ತು ಮಾತ್ರೆಗಳ ಹಕ್ಕಿಯುಲಿಯಲಿ
ಬಸಿಯುತ್ತಿದೆಯೇ? ಎಂದೆನಿಸಿತು.
ಇವರಲ್ಲಿದೆ ಹೊಸ
ಮಾರ್ಗೋಪಾಯಗಳು,
ಹೋರಾಟಕ್ಕೆ ಅಂತರ್ಜಾಲದರ್ಜಿ.
ಮೈಕೈ ನೋವಿಲ್ಲದೇ
ವಿರೋಧ ಸಾಧ್ಯ.
೨
ಅಭಿಯಾನ ಕ್ಲಿಕ್ಕುಗಳಲಿ
ಶುರು.
ಎದುರಿಸೋಕೆ ಹುಸಿನಾಮ, ಹುಸಿವಿಳಾಸದ
ಬಲಪಡೆವ ಉಗ್ರಪ್ರತಾಪಿಗಳೇ ಅಕ್ಷರ ಯುದ್ಧದಲಿ
ಕಾದುವ ಪ್ರಜಾತಂತ್ರದ ನಿಜ ಸೈನಿಕರು.
ನಾರ್ಸಿಸಿಸ್ಟುಗಳ ಫೋಟೋ
ಯಾತ್ರೆ, ಹಂಚು
ಮೆಚ್ಚು, ಅಭಿಮತವ
ತೂರಿಸುವ ವೇದಿಕೆಗಳಲಿ
ಅಂತರ್ಜಾಲದ ಸ್ನೇಹ ಜೀವಿ,
ನಿಜದಲಿ ಏಕಾಂಗಿ!
ಅಂತರ್ಮುಖಿಯೇ?.
ಗುಂಪುಮಾಡಿ, ಮೆಚ್ಚುಗೆಗಳ ಕಾಯುವ,
ಮುಖ ಮೂತಿಯೂದಿಸಿ, ಗೆಲುವಿನ ಚಿಹ್ನೆಯ
ಜೊತೆಗೆ ನಗೆಯ ಬಲೆ ಬೀಸಿದರೆ ಇವರಿಂದ
ಆರೋಗ್ಯಕರ ಸಮಾಜ ಸಾಧ್ಯ!
ಸಮಯವುಳಿದರೆ
ಜಾಲದೊಳಗೆ
ಪ್ರಚಾರ ಮಾಡುತ್ತಾರೆ
ಆಂಗ್ಲ ಭಾಷೆಯಲ್ಲಿ
ಕನ್ನಡದ ಮಹತ್ವ,
ಸ್ವಚ್ಚತೆ,ಶಿಕ್ಷಣ
ಶೌಚಾಲಯ ಬಳಕೆ ಇತ್ಯಾದಿ.
೩
ಕೊನೆಗೆ ಮಾಡಬೇಕಿರುವುದಿಷ್ಟೇ.
‘ಚಂದಾದಾರರಾಗಿ’ ಎಂಬ ಗುಂಡಿಯನೊತ್ತಿ,
ಗಂಟೆಯನು ಹೊಡೆದರೆ, ಯುವ ಜನ್ಮ ಪಾವನ.
ಬಾರಿಸಿದಂತೆ ಕನ್ನಡದ ಡಿಂಡಿಮವ.
Comments
Post a Comment