ಕುರುಡು ಮಂತ್ರ -ಪದ್ಮನಾಭ ಆಗುಂಬೆ ಅವರ ಕಾದಂಬರಿ ಬಗ್ಗೆ ನನ್ನ ಲೇಖನ.

ಕುರುಡು ಮಂತ್ರ -ಪದ್ಮನಾಭ ಆಗುಂಬೆ ಅವರ ಕಾದಂಬರಿ ಬಗ್ಗೆ ನನ್ನ ಲೇಖನ.




ಇಂಡಿಯಾ ದೇಶದ ಅಪಾಯಗಳಲ್ಲಿ ಪ್ರಮುಖವಾದದ್ದು ಭವಿಷ್ಯದೆಡೆಗೆ ನಿಖರ ಗುರಿ ಹೊಂದಿರದೆ ಹಾಗೆಯೇ ಮುಂದೆ ಸಾಗುತ್ತಿರುವ ಯುವಜನತೆ. ಯುವಜನತೆ ಸರಿಯಾದ ದಾರಿ ದಿಕ್ಕು ತೋರಿದರೆ ಮಾತ್ರ ದೇಶಕ್ಕೆ ಆಸ್ತಿ ಹಾಗೂ ಅಭಿವೃದ್ಧಿಗೆ ದಾರಿ. ಅದೇ ಇವರುಗಳು ಗೊತ್ತುಗುರಿಯಿಲ್ಲದೇ ಸಾಗುತ್ತಿದ್ದರೆ, ಇವರುಗಳು ಒಂತರ ಟೈಂಬಾಂಬ್ ಎಂದೇ ಹೇಳಬಹುದು, ಏಕೆಂದರೆ ಹೀಗಾದಲ್ಲಿ ಈ ಯುವಜನತೆ ಮಾನವ ಸಂಪನ್ಮೂಲ ವಾಗುವ ಬದಲು ಜನಸಂಖ್ಯಾ ಸ್ಫೋಟದಂತಹ ಸಮಸ್ಯೆಯಾಗಲೂಬಹುದು,ನಂತರದಲ್ಲಿ ನಿರುದ್ಯೋಗ, ಸಾಮಾಜಿಕ ಪಿಡುಗುಗಳು, ಸಂಸ್ಕಾರದ ಕೊರತೆ, ಮುಂತಾದ ರೋಗಗಳಿಗೆ ಕಾರಣವಾಗಬಹುದು. ಇದರಲ್ಲಿ ಯಾವುದೇ ಅನುಮಾನವಿಲ್ಲ.

 ದಾರಿತಪ್ಪಿದ ಇಂತಹ ಯುವಜನತೆಯ ಪೈಕಿ ಒಬ್ಬ ಯುವಕನ ಕಥೆಯೇ "ಕುರುಡು ಮಂತ್ರ" ಎಂದು ಹೇಳಬಹುದು. ಈ ಕಾದಂಬರಿಯ ಮುಖ್ಯ ಪಾತ್ರಧಾರಿ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಅಥವಾ ತನ್ನ guilt ಅನ್ನು ಮರೆಮಾಚಲು ಆಧ್ಯಾತ್ಮ, ಧರ್ಮ,  ಪ್ರವಚನಗಳಲ್ಲಿ ತೊಡಗಿಕೊಂಡರೆ ಏನಾಗಬಹುದು ಎಂಬುದಕ್ಕೆ ಟೀಕಪ್ಪನಿಗಿಂತ ಬೇರೆ ಉದಾಹರಣೆ ಬೇಕೆ?
 ಇಲ್ಲಿ ಟೀಕಪ್ಪ ಯುವ ಜನತೆಯ ರೆಪ್ರೆಸೆಂಟೇಟಿವ್ ನಂತೆ ಕಂಡುಬರುತ್ತಾನೆ, ಅದಲ್ಲದೆ ಯುವ ಸಂಸ್ಕೃತಿಯ ಪ್ರತಿಬಿಂಬವು ಸಹಿತ ಆಗಿದ್ದಾನೆ. ಕಾದಂಬರಿಯು ಹದಿಹರೆಯದ ತಲ್ಲಣಗಳು, ಬಂಡಾಯ ಮನೋಭಾವ, ಕಾಮದೆಡಗಿನ ಕುತೂಹಲ,ಕೌತುಕ ಹಾಗು ಅದರ ಬಗೆಗಿನ ಮಡಿವಂತಿಕೆ, ನಿರ್ಲಕ್ಷ್ಯ ಹಾಗೂ ನಿರ್ಲಕ್ಷ್ಯದ ಅಪಾಯಗಳು ಇವುಗಳನ್ನು ಬಹಳ ಮನೋಜ್ಞವಾಗಿ ಚಿತ್ರಿಸುತ್ತದೆ.

 

ಕಾದಂಬರಿಯ ಹೆಸರೇ ಹೇಳುವಂತೆ, ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲವಾದರೂ ಸಹ, ಕಾಕತಾಳಿಯವಾಗಿ ಮಂತ್ರ ಹೇಳುವ ವೇಳೆಯಲ್ಲೇ ಮಾವಿನಕಾಯಿ ಉದರಿಬಿಟ್ಟರೆ?  ಕಾದಂಬರಿಯಲ್ಲಿ  ನಡೆಯುವುದೂ ಅದೇ. ಟೀಕಪ್ಪನ ಮೊದಲ ಪ್ರಯತ್ನದಲ್ಲಿ ಆತನ ಕುರುಡು ಮಂತ್ರಕ್ಕೆ ಆತನ ಕದ್ದ ಜಮಖಾನೆಯು ವಾಪಸ್ಸು ಸಿಕ್ಕಿಬಿಟ್ಟಿತು. ಮುಂದುವರೆದು, ಇದೇ ರೀತಿ ಟೀಕಪ್ಪನ ಲೆಕ್ಕಾಚಾರಗಳು ಅವನಂದುಕೊಂಡಂತೆಯೇ ನಡೆದು, ಆತ ಮರಳಿ ವಾಪಸ್ ಆತನ ಊರನ್ನು ಸೇರುವವರೆಗೂ, ಹಾಗೂ ಆಶ್ರಮವನ್ನು ಕಟ್ಟುವವರೆಗೆ, ರಾಜಕೀಯ ಪ್ರವೇಶ ಮಾಡುವವರೆಗೂ ನಡೆದು ಬಂದಿದ್ದು ಕಾದಂಬರಿಯ ತಿರುಳು.
 ಟೀಕಪ್ಪ ಹದಿಹರೆಯದ ತಲ್ಲಣಗಳ ಪ್ರತೀಕ, ಭವಿಷ್ಯದ ಡಗಿನ ಅನಿಶ್ಚಿತತೆ ಅವನೊಬ್ಬನ ಸಮಸ್ಯೆಯಲ್ಲ ಬದಲಿಗೆ, ಭವ್ಯ ಭಾರತದ ಎಲ್ಲ ಯುವಮನಸ್ಸುಗಳ ಸಮಸ್ಯೆಯೂ ಆಗಿದೆ. ಟೀಕಪ್ಪನ ಕಥೆಯನ್ನು ಅದ್ಭುತವಾಗಿ ಸೆರೆ ಹಿಡಿದು ತಮ್ಮ ನೇರ ನಿರೂಪಣೆಯಲ್ಲಿ ನಮ್ಮೆದುರು ಉಣಬಡಿಸಿ, ತಮ್ಮ ಚೊಚ್ಚಲ ಕೃತಿಯಲ್ಲಿ ಇದುವರೆಗೂ ಯಾರೂ ಹೇಳದ ನೀತಿಯನ್ನು ಪ್ರಸ್ತುತಪಡಿಸುವಲ್ಲಿ ಪದ್ಮನಾಭ ಅವರು ತಮ್ಮ ಕಾದಂಬರಿಯಲ್ಲಿ ಯಶಸ್ವಿಯಾಗಿದ್ದಾರೆ.



 ಕಥೆಯ ನಿರೂಪಣೆ, ವಸ್ತು, ವಿಷಯ ಎಲ್ಲವೂ ಸ್ಪಷ್ಟ ನೇರ ಹಾಗೂ ಸರಳವಾಗಿದ್ದು ಓದಿಸಿಕೊಂಡು ಹೋಗುವ ಗುಣವನ್ನು ಹೊಂದಿದೆ. ರಿಯಲಿಸ್ಟಿಕ್ ಆದ ವಿವರಗಳ ಜೊತೆಗೆ ಕಥೆಯ ಹಿನ್ನೆಲೆ, ಬೇರೆ ಬೇರೆ ಪಾತ್ರಗಳ ಪರಿಚಯ, ಇವುಗಳು ಕಥೆಗಳ ಓಟದೊಡನೆ ಸಾಗುವುದರಿಂದ ಹಾಗೂ ಪಾತ್ರಗಳು ಮಲೆನಾಡಿನ ಪರಿಸರಕ್ಕೆ ಹೊಂದಿಕೊಳ್ಳುವಂತೆ ಇರುವುದರಿಂದ, ಓದುಗರಿಗೆ ಇದು ಪದ್ಮನಾಭರವರು ಬರೆದ ಮೊದಲ ಕಾದಂಬರಿ ಎನ್ನುವುದು ಆಶ್ಚರ್ಯ ತರುವ ವಿಷಯವಾಗಿ ಮಾಡುತ್ತದೆ. ಅಂದರೆ ಈಗಾಗಲೇ ಸಾಹಿತ್ಯದಲ್ಲಿ ಸಾಕಷ್ಟು ಕೃಷಿ ಮಾಡಿದ ಅನುಭವವು ಅವರ ಕೃತಿಯಲ್ಲಿ ಕಾಣುತ್ತಿದೆ ಎನ್ನಬಹುದು.
 ಕಲ್ಲಿಗೆ ಕುಂಕುಮ ಹಚ್ಚಿ ದೇವಸ್ಥಾನಗಳನ್ನು ಮಾಡಿ ಪವಾಡಗಳನ್ನು ಮಾಡಿದ ಕಥೆ, ಇದ್ದಕ್ಕಿದ್ದಂತೆ ಸತ್ಯ ಸಾಕ್ಷಾತ್ಕಾರ ವಾದಂತಹ ಕಥೆ, ಬಹುಧರ್ಮಗಳ ನಡುವೆ ಏಕತೆಯನ್ನು ಸಾಧಿಸುವಂತಹ ಕಥೆ ಹೀಗೆ ಸಾಕಷ್ಟು ಧರ್ಮಕ್ಕೆ ಸಂಬಂಧಪಟ್ಟ ಕಥೆಗಳು ಈಗಾಗಲೇ ಬಂದಿವೆ, ಆದರೆ ಈ ಕಾದಂಬರಿಯು ಇವತ್ತು ಅವೆಲ್ಲಕ್ಕಿಂತ ಭಿನ್ನವಾಗಿ ನಿಲ್ಲಲು ಕಾರಣವೇನೆಂದರೆ ಈ ಕಾದಂಬರಿಯ ಮುಖ್ಯ ಪಾತ್ರಧಾರಿ ಆದಂತಹ ಟೀಕಪ್ಪನ ಮುಗ್ಧತೆ. ಈ ಮುಗ್ಧತೆಯು ಕ್ರೌರ್ಯ ಹಾಗೂ ಕಾರ್ಯತತ್ಪರತೆಯ ಜೊತೆಗೆ ಆಗಾಗ ಬದಲಾಗುತ್ತಿರುವುದೂ ಉಂಟು. ತನ್ನ ಕಳೆದುಹೋದ ಜಮಖಾನೆ ಯನ್ನು ವಾಪಸ್ ಪಡೆಯಲು ಉಪಯೋಗಿಸಿದ ಕುರುಡು ಮಂತ್ರ ತಂತ್ರ ಆತನ ಮುಗ್ಧತೆಯನ್ನು ತೋರಿಸುತ್ತದೆ.  ಈ ಮಂತ್ರದ ತಂತ್ರ ಯಶಸ್ವಿಯಾಗುತ್ತಿದ್ದಂತೆಯೇ ಆತ ತನ್ನ ಹದಿಹರೆಯದ ಪ್ರೇಮವನ್ನು ಹಿರಿಯರಲ್ಲಿ ಹೇಳಲು ಯಶಸ್ವಿಯಾಗದೇ ಹಳ್ಳಿ ಬಿಟ್ಟು ಓಡಿಹೋಗುತ್ತಾನೆ. ಕಾಮಾಟಿಪುರದ ಆತನ ಕೆಲಸ ಆತನಲ್ಲಿದ್ದ ಮುಗ್ಧತೆಯನ್ನು ಕ್ರೌರ್ಯಕ್ಕೆ ಬದಲಾಯಿಸುತ್ತದೆ. ಉದಾಸೀನ ಪ್ರವೃತ್ತಿಯ ಪಂಥದ ಸಂನ್ಯಾಸಿಗಳ ಜೊತೆಗಿನ ವಾಸ ಅವನಲ್ಲಿನ ಕಾರ್ಯತತ್ಪರತೆಯನ್ನು ತಿಳಿಸುತ್ತದೆ. ನಿರಂತರ ಕೆಲಸದಲ್ಲಿ ಆತ ಕಳೆದುಹೋಗಿ ತನ್ನ ಜೀವನದ ಪರಮ ಉದ್ದೇಶವನ್ನೇ ಮರೆತಂತೆ ಭಾಸವಾಗುವುದು ಟೀಕಪ್ಪನ ಜೀವನದ ತಿರುವುಗಳಲ್ಲಿ ಒಂದು.
 ಮುಗ್ಧ ಪ್ರಾಮಾಣಿಕ ಕೆಲಸಗಾರ ಒಮ್ಮೆ ಮಹತ್ವಾಕಾಂಕ್ಷಿಯಾಗಿ ತನ್ನ ದಣಿಯನ್ನೇ ಕೊಲ್ಲುವ "ದಿ ವೈಟ್ ಟೈಗರ್", ಹಾಗೆಯೇ ಪ್ರಪಂಚವೆಲ್ಲಾ ಸುತ್ತಿದರೂ ಸಹ ಜೀವನದ ಅರ್ಥ ತಿಳಿಯಲು ಮರಳಿ ತನ್ನೂರಿಗೆ ಮರಳಿದ "ಅಲ್ಕೆಮಿಸ್ಟ್" ಮುಂತಾದ ಕಾದಂಬರಿಗಳ ಜೊತೆಗೆ ಹೋಲಿಸಬಹುದಾದ ಕಾದಂಬರಿ ಹಾಗೂ ಈ ಅದ್ಭುತ ಕೃತಿಗಳ ಸಾಲಿನಲ್ಲಿ ನಿಲ್ಲಬಹುದಾದ ಕೃತಿ "ಕುರುಡು ಮಂತ್ರ" ಎನ್ನಬಹುದು.
 ಕಾದಂಬರಿಯಲ್ಲಿ ನಮಗೆ ಕಥೆ ಸಾಗುವ ವೇಗ ಅತ್ಯಂತ ಹಿತವೆನಿಸುತ್ತದೆ. ಅದೇ ರೀತಿ, ನಮಗೆ ತುಂಬಾ ಆಪ್ತವೆನಿಸುವುದು ಕೃತಿಕಾರರ ಪದಪ್ರಯೋಗಗಳು, ಭಾಷಾಪ್ರಯೋಗ ಹಾಗೂ ಶೈಲಿ. ಕಾದಂಬರಿಕಾರರು ತಮ್ಮ ವಿಶೇಷ ಶೈಲಿಯಲ್ಲಿ ಕೆಲವೊಂದು ಹೊಸ ನುಡಿಗಟ್ಟುಗಳನ್ನು ಪೋಣಿಸಿ, ಅವುಗಳಿಗೆ ತಮ್ಮದೇ ವಿಶೇಷ ವ್ಯಾಖ್ಯಾನದೊಡನೆ ಹೊಸ ಅರ್ಥಗಳನ್ನು ಹಚ್ಚಿ ಕಾದಂಬರಿಯ ಮೆರುಗನ್ನ ಹೆಚ್ಚಿಸಿದ್ದಾರೆ.
 ಟೀಕಪ್ಪ ಪಿಯುಸಿ ಫೇಲಾದರೂ ಸಹ  ಓದನ್ನ ಬಿಟ್ಟು ಬೇರೆ ಯಾವುದೋ ಸೆಳೆತಕ್ಕೆ ಒಳಗಾಗಿ, ದೇಶಾಂತರ ತಿರುಗಿ, ಹಣದ ಬಗ್ಗೆ ವ್ಯಾಮೋಹವನ್ನೂ ಬಿಡದೆ,ಆಸ್ತಿಕತೆಯಲ್ಲಿಯೂ ಸಂಪೂರ್ಣವಾಗಿ ಮುಳುಗದೆ,  ಹಠ ಯೋಗವನ್ನು ಕಲಿತು, ಯೋಗ ಸಾಧಕನಾಗಿ ವಾಪಸಾಗುವುದು ಹಾಗೂ ತನ್ನ ಹಳ್ಳಿಯಲ್ಲಿಯೇ ಆಶ್ರಮ ಸ್ಥಾಪಿಸಿ ರಾಜಕೀಯಕ್ಕೂ ಎಂಟ್ರಿ ಕೊಡುವುದು ಹೀಗೆ ಸಾಕಷ್ಟು ತಿರುವುಗಳ ಜೊತೆಗೆ ನಮ್ಮನ್ನ ವಿಚಾರಕ್ಕೆ ವಿಮರ್ಶೆಗೆ ಒಳಪಡಿಸುವುದು ಈ ಕಾದಂಬರಿಯ ಹೆಗ್ಗಳಿಕೆ.





ಕನ್ನಡ ಪುಸ್ತಕಗಳನ್ನು ಓದಿ, ಓದುವ ಪ್ರವೃತ್ತಿಯನ್ನು ಬೆಳೆಸಿ, ನಿಜ ಅರ್ಥದಲ್ಲಿ ಕನ್ನಡವನ್ನು ಸಂಭ್ರಮಿಸೋಣ ಹಾಗೂ ಕನ್ನಡ ರಾಜ್ಯೋತ್ಸವವನ್ನು ಒಳ್ಳೆಯ ಕನ್ನಡ ಪುಸ್ತಕವನ್ನು ಪುಸ್ತಕ ಪ್ರೇಮಿಗಳಿಗೆ ಉಡುಗೊರೆಯಾಗಿ ನೀಡುವ ಮೂಲಕ ಆಚರಿಸೋಣ.
ನಿಮ್ಮ ಅಭಿಪ್ರಾಯ ಗಳನ್ನ ಕಾಮೆಂಟ್ ಸೆಕ್ಷನ್ ನಲ್ಲಿ ತಿಳಿಸಿ ಹಾಗೂ ಒಂದು ಪುಸ್ತಕವನ್ನು ರಾಜ್ಯೋತ್ಸವದ ಅಂಗವಾಗಿ ನಿಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆಯಾಗಿ ನೀಡಿ. #ಪುಸ್ತಕ ಟ್ಯಾಗ್ ಜೊತೆಗೆ ಶೇರ್ ಮಾಡಿ.

ಈ ಲೇಖನ ಇಷ್ಟವಾಗಿದ್ದಲ್ಲಿ ನಿಮ್ಮ ಫೇಸ್ಬುಕ್ ಗೋಡೆ, ಸ್ನೇಹಿತರು, ವಾಟ್ಸಾಪ್ ಇಲ್ಲೆಲ್ಲಾ ನನ್ನ ಹೆಸರಿನ ಜೊತೆಗೆ ಶೇರ್ ಮಾಡಿ. ಧನ್ಯವಾದಗಳು.

ದೀಪಕ್ ಡೋಂಗ್ರೆ, ಆಂಗ್ಲ ಭಾಷಾ ಉಪನ್ಯಾಸಕರು, ಶಿವಮೊಗ್ಗ.
ಪ್ರತಿಗಳಿಗಾಗಿ ಸಂಪರ್ಕಿಸಿ ಲೇಖಕರು ಪದ್ಮನಾಭ ಆಗುಂಬೆ 9902863762
ಪ್ರಕಾಶಕರು 9900195626


 

Comments

  1. ಪ್ರತಿಗಳಿಗಾಗಿ ಕೆಳಕಂಡ ನಂಬರ್ ಗೆ ವಾಟ್ಸಾಪ್ ಮಾಡಿ 9500169063 ಮತ್ತು 8610155903

    ReplyDelete

Post a Comment

Popular posts from this blog

ಸ್ಪೆಷಾಲಿಟಿ