ತಪೋ ಫಲ

ತಪೋ ಫಲ ಎಂದಾಕ್ಷಣ ಇದು ಯಾವುದೋ ಪುರಾಣ ಕಾಲದ ಕತೆ ಅಂದುಕೊಳ್ಳಬೇಡಿ. ಇದು ಈ ಶತಮಾನದ ಕಥೆ.
                       ನನ್ಗೆ ಯಾವಾಗಲೂ ಒಬ್ಬರು ಆಧ್ಯಾತ್ಮದ ದಾಸರಾದ ಮನುಷ್ಯರೊಬ್ಬರು ಹೇಳುತಿದ್ದರು, ದೇವರನ್ನು ನಿರ್ಮಲ ಮನಸ್ಸಿಂದ ಬೇಡಿಕೊಂಡರೆ ನಮ್ಮ ಇಷ್ಟಾರ್ಥಗಳು ಖಂಡಿತವಾಗಿ ಈಡೇರುತ್ತದೆ ಎಂದು. ಇದನ್ನು ಕೇಳಿ ನಾಸ್ಥಿಕನಾಗಿ ನಮ್ಮ ಮನೆಯಲ್ಲಿ ಎಲ್ಲ ಪದ್ದತಿಗಳನ್ನೂ ಹೀಯಾಳಿಸುತ್ತ, "ಬೆಕ್ಕಿನ ಮೇಲೆ ಬುಟ್ಟಿ ಮುಚ್ಚಿಡುವ" ಕತೆ ಹೇಳಿ ತಮಾಷೆ ಮಾಡುತ್ತಾ ಇದ್ದ ನಾನು  ಯಾವಾಗ ಅಪ್ಪಟ ಭಕ್ತಿ ಪಂಥಕ್ಕೆ ಸೇರಿದ ಮನುಷ್ಯನಾದೆ ಎಂಬುದೇ ತಿಳಿಯಲಿಲ್ಲ. ಕೆಲವೇ ವರ್ಷಗಳಲ್ಲಿ ನಾನು ದೇವರ ಪಕ್ಕಾ ಭಕ್ತನಾಗಿ ದೇವರ ನಾಮ ಸ್ಮರಣೆ ಇಲ್ಲದೆ ಯಾವ ಕೆಲಸಕ್ಕೂ ಹೆಜ್ಜೆ ಇಡದ ಮಟ್ಟಕ್ಕೆ ಬಂದು ಬಿಟ್ಟೆ. ದಿನಾಲು ಬೆಳಿಗ್ಗೆ ಎದ್ದು ದೇವರ ಸ್ತೋತ್ರ ಕೇಳುವುದು, ಹೇಳುವುದು, ಟಿವಿಯಲ್ಲಿ ಹಲವಾರು ದೇವರ ದರ್ಶನ ಮಾಡುವುದು,ಮಂಗಳಾರತಿಯಲ್ಲಿ ಪಾಲ್ಗೊಂಡಂತೆ ಕಲ್ಪಿಸಿಕೊಳ್ಳೋದು. ದಿನಭವಿಷ್ಯ ಚಾಚೂ ತಪ್ಪದೆ ನೋಡೋದು, ಜ್ಯೋತಿಷ್ಯ ಕಾರ್ಯಕ್ರಮದಲ್ಲಿ ಬರುವ ಎಲ್ಲ ಪರಿಹಾರಗಳನ್ನು ವಿಶೇಷ ಆಸಕ್ತಿಯಿಂದ ಪಾಲಿಸುವುದು ಹೀಗೆ ನನ್ನ ದಿನ ನಿತ್ಯದ ಚಟುವಟಿಕೆಗಳಲ್ಲಿ ಮಹತ್ತರ  ಬದಲಾವಣೆ ಕಂಡುಕೊಂಡೆ. ಹೀಗಿರುವಾಗ ದೇವಸ್ಥಾನದಲ್ಲಿ ಸಿಕ್ಕ ಭಕ್ತರೊಬ್ಬರು "ರಾಮ ನಾಮ ಜಪವನ್ನು ಒಂದು ಕೋಟಿ ಸಾರಿ ಬರೆದು ದೇವರ ಗೂಡಿನಲ್ಲಿಟ್ಟು ದಿನಾ ಪೂಜೆ ಮಾಡಿದರೆ ನಮ್ಮ ಎಲ್ಲ ಇಷ್ಟಾರ್ಥಗಳು ಈಡೇರುತ್ತದೆ" ಎಂದರು. ಇಷ್ಟು ದೊಡ್ಡ ಭಕ್ತನಾದ ನಾನು ಇದನ್ನು ಪ್ರಯತ್ನಿಸಲೆಬೇಕಾಯ್ತು.
                   ಕೆಲವೇ ತಿಂಗಳಲ್ಲಿ ನನ್ನ ರಾಮ ನಾಮ ಯಜ್ಞ ಪೂರ್ತಿಯಾಗಿ ಪುಸ್ತಕವನ್ನು ದೇವರ ಗೂಡಿನಲ್ಲಿ ಇಟ್ಟು ಪೂಜೆಯನ್ನೂ ಪ್ರಾರಂಬಿಸಿ ಆಯಿತು.ಆಗ ನನ್ನ ಇಷ್ಟಾರ್ಥ ಸಿದ್ದಿಯಾಗುವ ಮುಂಚೆ ಒಂದು ಘಟನೆ ನಡೆಯಿತು. ದೇವರ ನಾಮದ ಗುಂಗಿನಲ್ಲಿ, ಘಾಡ ನಿದ್ರೆಯಲ್ಲಿದ್ದ ನನ್ಗೆ ಮನೆಯಲ್ಲಿ ದರೋಡೆಯಾಗಿದ್ದು ತಿಳಿಯಲೇ ಇಲ್ಲ. ನೀವಂದುಕೊಂಡಂತೆ ಒಡವೆ ವಸ್ತ್ರ, ದೇವರ ವಿಗ್ರಹಗಳ ಜೊತೆ ನನ್ನ ರಾಮ ನಾಮ ಜಪ ಯಜ್ಞದ ಪುಸ್ತಕವೂ ಕಳ್ಳತನವಾಗಿತ್ತು.
                   ಮತ್ತೆ ದೇವರ ಮೇಲೆ ನಂಬಿಕೆ ಕಳೆದುಕೊಳ್ಳುವ ಹಂತಕ್ಕೆ ಬಂದು ಮುಟ್ಟಿದೆ, ಕೆಲವು ವಾರಗಳ ನಂತರ ಪೇಪರ್ನಲ್ಲಿ ವರದಿಯೊಂದನ್ನು ಓದಿದೆ. ಕುಖ್ಯಾತ ದರೋಡೆಕೋರನೊಬ್ಬ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ. ಜೊತೆಗೆ ಅಪಾರ ಐಶ್ವರ್ಯ ಕೂಡ ಪೋಲೀಸರ ವಶವಾಗಿತ್ತು. ನಾನು ರಾಮ ನಾಮ ಜಪ ಮಾಡುವಾಗ ಅಪಾರ ಐಶ್ವರ್ಯ ಪಡೆಯುವ ಉದ್ದೇಶದಿಂದಲೇ ದೇವರನ್ನು ಸ್ತುತಿಸುತ್ತಿದ್ದೆ. ಬಹುಶ ಆ ಕಳ್ಳ ನನ್ನ ರಾಮ ನಾಮ ಜಪದ ಪುಸ್ತಕ ಅವನ ಮನೆಯ ದೇವರ ಗೂಡಿನಲ್ಲಿಟ್ಟು ಪೂಜೆ ಮಾಡಿದ ಅಂತ ಅನ್ನಿಸುತ್ತೆ ಅದಕ್ಕೆ ಅವನಿಗೆ ಅಪಾರ ಐಶ್ವರ್ಯ ಸಿದ್ದಿಯಾಯ್ತು. ನನ್ನ ತಪೋಫಲ ಅವನಿಗೆ ಸಿದ್ದಿಯಾಯ್ತು.

      ಈ ಕತೆ ಇಲ್ಲಿಗೆ ಮುಕ್ತಾಯ ನಿಮ್ಮ ತಪೋಫಲ ನಿಮಗೆ ಸಿಗಲಿ ಅಂಥಾ ಹಾರೈಸುತ್ತೇನೆ.

Comments

Popular posts from this blog

ಸ್ಪೆಷಾಲಿಟಿ

ಕುರುಡು ಮಂತ್ರ -ಪದ್ಮನಾಭ ಆಗುಂಬೆ ಅವರ ಕಾದಂಬರಿ ಬಗ್ಗೆ ನನ್ನ ಲೇಖನ.