ಬೈಕ್ ಬಾಲು ಮತ್ತು ಬಲಿ.

                             ಬೈಕ್  ಬಾಲು ಮತ್ತು ಬಲಿ, ಕತೆಯ ಹೆಸರು ಓದಿದೊಡನೆ ಓದುಗರು ಇದು ಯಾವುದೋ ಬೈಕ್ ಓಡಿಸುವವನ ದುರಂತ  ಕತೆ ಎಂದು ತಿಳಿದರೆ, ಅದು ಒಂತರ  ಸರಿ. ನಮ್ಮೂರ ಬಾಲುಗೆ ಬೈಕ್ ಗಳೆಂದರೆ ಪ್ರಾಣ. ಯಾವಾಗಲೂ ವಿವಿದ ಬೈಕ್ ಗಳ ಬಗ್ಗೆಯೇ ಯೋಚಿಸುವುದು ಅವನ ಜಾಯಮಾನ. ಅವನ ರೂಮಿನ ತುಂಬೆಲ್ಲ ವಿವಿದ ಬಗೆಯ ಬೈಕ್ ಗಳ ಚಿತ್ರಗಳು. ಕಾಲೇಜು ಮುಗಿಸುತ್ತಿದ್ದಂತೆ ಬೇರೆ ಬೇರೆ ಬೈಕ್ ಗಳ ಬಗ್ಗೆ ಇಂಟರ್ನೆಟ್ನಲ್ಲಿ ಹುಡುಕಾಟ, ಚಿತ್ರಗಳ ಸಂಗ್ರಹ, ಯಾವ ಯಾವ ಬೈಕ್ ಎಷ್ಟು ಮೈಲೇಜು ಕೊಡುತ್ತೆ, ಎಷ್ಟು ಸಿ ಸಿ ಎಂಜಿನ್. ಪಿಕ್ ಅಪ್ ಹೇಗಿದೆ, ಇವೆಲ್ಲ ಅವನ ಅಧ್ಯಯನದ ವಿಷಯಗಳು. ಇಂತಹ ಬೈಕ್ ಹುಚ್ಹನ ಹತ್ತಿರ ಹಳೆಯ ಬೈಕ್ ಒಂದಿತ್ತು. ಆತ ಅದನ್ನು ಓಡಿಸಿಕೊಂಡು ಹೋಗುತ್ತಿರುವಾಗ ಹಾರ್ನ್ ಹೊಡೆಯೋದೆ ಬೇಕಿರಲಿಲ್ಲ, ಅದರ ಎಂಜಿನ್ ಆರ್ಭಟಕ್ಕೆ ಜನ ರಸ್ತೆಯಿಂದ ದೂರ ಸರಿಯುತ್ತಿದ್ದರು , ನಟ್ಟುಗಳು ಸಡಿಲವಾಗಿ ಬೈಕ್ ಹಾಡಿಗೆ ಕೋರಸ್ ಹಾಡುತ್ತಿತ್ತು. ಅದರಲ್ಲಿ ಕೂರಲು ಮಿತ್ರರು ಯಾರೂ ಮುಂದೆ ಬರುತ್ತಿರಲಿಲ್ಲ, ಏಕೆಂದರೆ ಅದು ನಿಲ್ಲಬೇಕಾದಲ್ಲಿ ನಿಲ್ಲುವ ಯಾವುದೇ ಲಕ್ಷಣಗಳು ಕಾಣುತ್ತಿರಲಿಲ್ಲ. ಅದನ್ನು ದೂಕಿ ಸ್ಟಾರ್ಟ್ ಮಾಡಬೇಕಿತ್ತು, ಯಾಕೆಂದರೆ ಅದರ ಕಿಕ್ಕರ್ ಮುರಿದಿತ್ತು. ಆತ ಎಲ್ಲಿಗೆ ಹೋಗಿದ್ದಾನೆ ಎಂದು ಯಾರು ಬೇಕಾದರೂ ಹುಡುಕಬಹುದಿತ್ತು, ಹೇಗೆ ಎಂದರೆ ಆತನ ಬೈಕ್ ಹೋದಲ್ಲಿ ಮೀಟರ್ಗೆ ಒಂದು ಹನಿ ಕಪ್ಪು ಆಯಿಲ್ ಸುರಿದಿರುತ್ತಿತ್ತು.
                           ಹೀಗಾದರೂ ಸಹ ಅವನ ಎದುರಲ್ಲಿ ಅವನ ಬೈಕ್ ಬಗ್ಗೆ ಕೇವಲವಾಗಿ ಮಾತನಾಡಿದರೆ ಆತ ಸಹಿಸುತ್ತಿರಲಿಲ್ಲ. ಯಾವಾಗಲೂ ತನ್ನ ಸ್ನೇಹಿತರ ಬಳಿ, ತನ್ನ ಬೈಕ್ ಹೇಗೆ ಇತರ ಕಂಪೆನಿಗಳ ಬೈಕ್ಗಳಿಗಿಂತ ಬಲಿಷ್ಠ, ಶಕ್ತಿಶಾಲಿ ಹಾಗೂ ಹೆಚ್ಹು ಮೈಲೇಜ್ ಕೊಡುತ್ತೆ ಅಂತ ಜಂಬ ಕೊಚ್ಚುತ್ತಿದ್ದ. ಅವನೊಡನೆ ವಾದ ಮಾಡಲು ಇಷ್ಟ ಪಡದೆ ಎಲ್ಲರೂ ಅವನು ಹೇಳಿದ್ದು ಸರಿ ಎನ್ನುತ್ತಿದ್ದರು ಹಾಗೂ ಅವನು ಇಲ್ಲದ ವೇಳೆ ತಮಾಷೆ ಮಾಡುತ್ತಿದ್ದರು.
                            ಬಾಲುವಿಗೆ ತನ್ನ ಬೈಕ್ ನ ಮೈಲೇಜ್ ಬಗ್ಗೆ ಅಪಾರ ಅಭಿಮಾನ. ಅದು ಲೀಟರ್ಗೆ ತೊಂಬತ್ತು ಕಿಲೋಮೀಟರು ಓಡುತ್ತೆ ಎಂಬುದು ಅವನ ವಾದ. ಬೇರೆ ಯಾವ ಬೈಕ್ ಸಹ ಇಷ್ಟು ಮೈಲೇಜ್ ಕೊಡಲು ಸಾಧ್ಯವಿಲ್ಲ ಎಂಬುದೇ ಅವನ ಹಠ.
                           ಹೀಗಿರುವಾಗ ಬೈಕ್ ಬಾಲುವಿನ ಪ್ರಣಯ ಪ್ರಸಂಗವನ್ನೂ ನಿಮಗೆ ಹೇಳಲೇ ಬೇಕು. ಆತನಿಗೆ ಮಿಸ್ ಕಾಲ್ ಒಂದು ಬಂದ ಹಿನ್ನೆಲೆಯಲ್ಲಿ, ಆ ಮಿಸ್ ಕಾಲ್ ಕೊಟ್ಟ ಮಿಸ್ ಗೆ ಈತ ಎಡೆಬಿಡದೆ ಸಂದೇಶಗಳನ್ನ ಕಳಿಸಿ ಈತ ಆಕೆಯೊಡನೆ ಪ್ರೀತಿಯಲ್ಲಿ ಬಿದ್ದಿದ್ದ. ಆಕೆ ಅದೊಂದು ದಿನ ಇವನನ್ನು ಮುಖತಃ ಭೇಟಿ ಮಾಡಲು ಒಪ್ಪಿದ್ದಳು. ಅವಳನ್ನು ಭೇಟಿಮಾಡುವ ಉದ್ದೇಶದಿಂದ ಆತ ಕೊಪ್ಪಕ್ಕೆ ಹೊರಡಲು ಸಿದ್ದನಾದ.
                           ಕೊಪ್ಪಕ್ಕೆ ಹೋಗಲು ಮೂವತ್ತು ಕಿಲೋಮೀಟರು ಇದ್ದು. ಈಗಾಗಲೇ ಇವನು ಪೆಟ್ರೋಲ್ ಹಾಕಿಸಿ ಸಾಕಷ್ಟು ಸುತ್ತಿ ಆಗಿತ್ತು. ನಾನಂದೆ "ಒಳ್ಳೆಯ ಕೆಲಸಕ್ಕೆ ಹೋಗುತ್ತಿದ್ದೀಯ ಚಾಕಲೇಟು ತಿಂದು ಪೆಟ್ರೋಲ್ ಹಾಕಿಸಿಕೊಂಡು ಹೋಗು, ನಿನ್ನ ಬೈಕ್ ಮೇಲಿನ ಅತಿ ನಂಬಿಕೆ ಬೇಡ ಮತ್ತೆ ಜಾಸ್ತಿ ಮೈಲೇಜ್ ಕೊಡುತ್ತೆ ಅಂತ ಸೀದಾ ಹೋದೀಯ ಜೋಕೆ" ಅಂತ. ಆದರೆ ಬಹಳ ಅರ್ಜೆಂಟ್ನಲ್ಲಿ ಇದ್ದ ಆತ ನನ್ನ ಮಾತು ಕೇಳದೆ ತನ್ನ ಬೈಕನ್ನ ಪ್ರೀತಿಯಿಂದ ಸವರಿ ಹೊರಟೆ ಬಿಟ್ಟ.
                          ವಾಪಸ್ ಬಂದ ನಂತರ ಆತ ಹೇಳಿದ ಕತೆಯ ಸಾರಾಂಶ ಹೀಗಿದೆ. ಈತ ಕೊಪ್ಪಕ್ಕೆ ಮುಟ್ಟುವ ಐದಾರು ಕಿಲೋಮೀಟರ್ ಇರುವಾಗಲೇ ಪೆಟ್ರೋಲ್ ಖಾಲಿಯಾಯಿತಂತೆ. "ಯಾವತ್ತೂ ಹೀಗಾಗಿರಲಿಲ್ಲ, ಇವತ್ತೇ ಯಾಕೆ ಹೀಗಾಯ್ತೇನೋ" ಅಂತ ಪರಿತಪಿಸುತ್ತಾ ಆತ ಕೊಪ್ಪ ಘಾಟಿಯಲ್ಲಿ ಬೈಕ್ ತಳ್ಳುತ್ತ, ಕೊಪ್ಪಕ್ಕೆ ಹೋಗುವಾಗ ಹನ್ನೆರಡು ಘಂಟೆ ಆಗಿತ್ತಂತೆ. ಹತ್ತು ಘಂಟೆಗೆ ಬಸ್ ಸ್ಟ್ಯಾಂಡ್ ನಲ್ಲಿ ಸಿಗುವುದಾಗಿ ಹೇಳಿದ್ದ ಈತನ "ಬೆಳದಿಂಗಳ ಬಾಲೆ" ಸಿಗಲೇ ಇಲ್ಲವಂತೆ. ಫೋನ್ ಪ್ರಯತ್ನಿಸಿದಾಗ ಈ ನಂಬರ್ "ಅಸ್ತಿತ್ವದಲ್ಲಿ ಇಲ್ಲ" ಎಂದು ತಿಳಿಯಿತಂತೆ.
                          ಈತನ ಬೈಕ್ ಮೇಲಿನ ಅತಿಯಾದ ನಂಬಿಕೆಯಿಂದ ಈತನ (ಕುರುಡು)ಪ್ರೀತಿ ಬಲಿಯಾಯಿತು.
                          ಇನ್ನೂ ಬಾಲು ಮಿಸ್ ಕಾಲ್ ಕೊಟ್ಟ ಮಿಸ್ ನ ನಂಬರ್ ಗೆ ಫೋನ್ ಮಾಡುತ್ತಲೇ ಇರುತ್ತಾನೆ ಆ ಕಡೆಯಿಂದ "ಅಸ್ತಿತ್ವದಲ್ಲಿ ಇಲ್ಲ" ಎಂಬ ಅಶರೀರವಾಣಿ ಕೇಳುತ್ತಲೇ ಇರುತ್ತೆ. ನಾನು ಯಾವಾಗಲೂ ಆತನಿಗೆ ಸಮಾಧಾನ ಹೇಳುತ್ತಿರುತ್ತೇನೆ " ಆಗಿದ್ದೆಲ್ಲ ಒಳ್ಳೆಯದಕ್ಕೆ, ಬಿಡು" ಅಂತ. ಈ ಘಟನೆಯಿಂದ ನಮಗೆಲ್ಲರಿಗೂ ಆದ ಒಂದು ಲಾಭ ಎಂದರೆ ಈಗ ಬಾಲು ತನ್ನ ಬೈಕ್ ಹಾಗು ಬೈಕ್ ಮೈಲೇಜ್ ಬಗ್ಗೆ ಕೊಚ್ಚಿ ಕೊಳ್ಳೋದು ಬಿಟ್ಟಿದ್ದಾನೆ.

Comments

Popular posts from this blog

ಸ್ಪೆಷಾಲಿಟಿ

ಕುರುಡು ಮಂತ್ರ -ಪದ್ಮನಾಭ ಆಗುಂಬೆ ಅವರ ಕಾದಂಬರಿ ಬಗ್ಗೆ ನನ್ನ ಲೇಖನ.